ಗಯಾ (ಬಿಹಾರ): ಕೇಂದ್ರ ಮಂತ್ರಿ ಕೌಶಲ್ ಕಿಶೋರ ಚೌಧರಿ ಶ್ರದ್ಧಾ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸಿದ್ದಾರೆ. ಜೊತೆಗೆ ಅವರು ಇಂದಿನ ಯುವಪೀಳಿಗೆಗೆ ಒಂದಿಷ್ಟು ಬುದ್ಧಿಮಾತುಗಳನ್ನೂ ಹೇಳಿದ್ದಾರೆ. ಇಂಥ ವಿಚಾರಗಳಲ್ಲಿ ಸುಶಿಕ್ಷಿತ ಯುವತಿಯರು ಅಶಿಕ್ಷಿತ ಯುವತಿಯರಿಂದ ಕಲಿತುಕೊಳ್ಳಬೇಕೆಂದು ಅವರು ಹೇಳಿದ್ದಾರೆ.
ಗಯಾ ಕ್ಲಬ್ ಆವರಣದಲ್ಲಿ ನಡೆದ ಮಹಾನ್ ವೀರಾಂಗನೆ ಊದಾ ದೇವಿ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಸುಶಿಕ್ಷಿತ ಯುವತಿಯರು ಲಿವ್ ಇನ್ ರಿಲೇಷನ್ ಶಿಪ್ ಸಂಬಂಧಕ್ಕಾಗಿ ತಂದೆ ತಾಯಿಯನ್ನು ತೊರೆಯುತ್ತಾರೆ. ಇದರಿಂದಲೇ ಅಪರಾಧಗಳು ಹೆಚ್ಚಾಗುತ್ತವೆ. ಯಾರೂ ಲಿವ್ ಇನ್ ರಿಲೇಷನ್ ಇಟ್ಟುಕೊಳ್ಳಬಾರದು. ಇಷ್ಟಾಗಿಯೂ ಲಿವ್ ಇನ್ ನಲ್ಲಿ ಇರಲೇಬೇಕೆಂದಿದ್ದರೆ ಅವರು ಕೋರ್ಟ್ನಿಂದ ದಾಖಲೆ ಮಾಡಿಸಬೇಕು. ಯಾವುದೋ ಯುವಕನೊಂದಿಗೆ ಬದುಕಲೇಬೇಕು ಅಂತಾದರೆ ಅವನೊಂದಿಗೆ ಮದುವೆ ಮಾಡಿಕೊಳ್ಳಿ.. ಹೀಗೆ ಆಧುನಿಕ ಕಾಲದ ಯುವತಿಯರಿಗೆ ಕೇಂದ್ರ ಸಚಿವ ಕೌಶಲ್ ಕಿಶೋರ ಚೌಧರಿ ಬುದ್ಧಿ ಹೇಳಿದ್ದಾರೆ.
ಮಾದಕ ದ್ರವ್ಯ ಸೇವಿಸುವುದಿಲ್ಲ ಎಂದು ಪ್ರಮಾಣ ವಚನ: ಶ್ರದ್ಧಾಂಜಲಿ ಸಭೆಯಲ್ಲಿ ಕೇಂದ್ರ ರಾಜ್ಯ ಸಚಿವ ಕೌಶಲ್ ಕಿಶೋರ್ ಚೌಧರಿ ಅವರಿಗೆ ಮಾಲಾರ್ಪಣೆ ಮಾಡಿ ಅಂಗವಸ್ತ್ರ ನೀಡಿ ಗೌರವಿಸಲಾಯಿತು. ಈ ವೇಳೆ ಕೇಂದ್ರ ಸಚಿವರು ನೆರೆದಿದ್ದ ಜನರಿಗೆ ಮದ್ಯಪಾನ ಮಾಡದಂತೆ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಊದಾದೇವಿ ಪಾಸಿ ಜೀ ಅವರು ಪಾಸಿ ಸಮುದಾಯದಿಂದ ಬಂದ ಮಹಾನ್ ನಾಯಕಿ ಎಂದು ಹೇಳಿದರು. ಅವರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ತನ್ನ ಜೀವಿತಾವಧಿಯಲ್ಲಿ ಅವರು 36 ಬ್ರಿಟಿಷರನ್ನು ಕೊಂದರು. ಅವರ ಹುತಾತ್ಮ ದಿನವನ್ನು ದೇಶದೆಲ್ಲೆಡೆ ಬಲಿದಾನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಅಡಿ ನಾವು ಇಂದು ಗಯಾ ತಲುಪಿದ್ದೇವೆ. ಇಂದು ನಮ್ಮ ದೇಶವನ್ನು ಮಾದಕ ವಸ್ತು ಮುಕ್ತ ದೇಶವನ್ನಾಗಿಸುವುದು ಅಗತ್ಯವಾಗಿದೆ. ಆಗ ಮಾತ್ರ ಹೊಸ ಪೀಳಿಗೆ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದರು.
ಕುಡಿತದಿಂದ ಕೌಶಲ್ ಕಿಶೋರ್ ಚೌಧರಿ ಮಗನ ಲಿವರ್ ಹಾಳು: ಕೌಶಲ್ ಕಿಶೋರ್ ತಮ್ಮ ಮಗನ ಉದಾಹರಣೆ ನೀಡಿ, ನನ್ನ ಮಗ ಕೂಡ ಡ್ರಗ್ಸ್ ಸೇವಿಸುತ್ತಿದ್ದ. ಇದರಿಂದಾಗಿ ಅವನ ಯಕೃತ್ತು ಹಾಳಾಗಿ ಮೃತಪಟ್ಟ. ನಾನು ಮತ್ತು ನನ್ನ ಹೆಂಡತಿ ನಮ್ಮ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಇಡೀ ದೇಶವೇ ಮಾದಕ ದ್ರವ್ಯ ಮುಕ್ತವಾಗಬೇಕು ಎಂದು ಅಭಿಯಾನ ಆರಂಭಿಸಿದ್ದೇವೆ.
ನಮ್ಮ ಅಭಿಯಾನದಲ್ಲಿ ಕೋಟಿಗಟ್ಟಲೆ ಜನ ಸೇರಿದ್ದಾರೆ. ಇಲ್ಲಿಯೂ ಜನರಿಗೆ ಮಾದಕ ದ್ರವ್ಯ ಸೇವಿಸುವುದಿಲ್ಲ ಎಂಬ ಪ್ರಮಾಣ ವಚನ ಬೋಧಿಸಿದ್ದೇವೆ. ದೇಶವನ್ನು ಮಾದಕ ದ್ರವ್ಯ ಮುಕ್ತಗೊಳಿಸಬೇಕಾದರೆ ಜನ ಮಾದಕ ದ್ರವ್ಯ ಸೇವನೆಯನ್ನು ನಿಲ್ಲಿಸುವುದು ಅತ್ಯಂತ ಮುಖ್ಯ ಎಂದು ಅವರು ಕರೆ ನೀಡಿದರು.
ಇದನ್ನೂ ಓದಿ: ಶ್ರದ್ಧಾಳನ್ನು ಕೊಂದು ಮುಖ ಸುಟ್ಟು ವಿರೂಪಗೊಳಿಸಿದ್ದ ಪಾತಕಿ ಅಫ್ತಾಬ್!