ನವದೆಹಲಿ: ಕೋವಿಡ್-19 ನಡುವೆಯೂ 12ನೇ ತರಗತಿ ಪರೀಕ್ಷೆಗೆ ಮುಂದಾಗಿರುವ ಆಂಧ್ರಪ್ರದೇಶ ಹಾಗೂ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ. ಈ ಪರೀಕ್ಷೆಯಿಂದ ಯಾವುದೇ ಸಾವು ವರದಿಯಾದರೂ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಲಿದ್ದು, ಈ ಸಂಬಂಧ 2 ದಿನದಲ್ಲಿ ಅಂತಿಮ ನಿರ್ಧಾರ ತಿಳಿಸುವಂತೆ ಸೂಚಿಸಿತು.
ಪರೀಕ್ಷೆ ನಡೆಸುವ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಂ.ಖಾನ್ವಿಲ್ಕರ್ ಮತ್ತು ನ್ಯಾ.ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ನ್ಯಾಯಪೀಠ, 'ನೀವು ಎಲ್ಲವನ್ನೂ ಅನಿಶ್ಚಿತ ಸ್ಥಿತಿಯಲ್ಲಿಡಲು ಸಾಧ್ಯವಿಲ್ಲ. ಪರೀಕ್ಷೆಗಳನ್ನು ನಡೆಸುವ ಬಗ್ಗೆ ಇನ್ನೂ ಏಕೆ ಅಫಿಡವಿಟ್ ಸಲ್ಲಿಸಿಲ್ಲ ಎಂದು ಕೇಳಿದರು.
ದೇಶದ ಎಲ್ಲ ರಾಜ್ಯಗಳು ಪರೀಕ್ಷೆ ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿದ್ದರೂ ನೀವೇಕೆ ಪರೀಕ್ಷೆ ರದ್ದು ಮಾಡುವ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಇದೇ ವೇಳೆ ಆಂಧ್ರ ಸರ್ಕಾರವನ್ನು ಕೋರ್ಟ್ ಪ್ರಶ್ನಿಸಿದೆ. ಈ ಬಗ್ಗೆ ಸರ್ಕಾರದಿಂದ ಯಾವುದೇ ಸ್ಪಷ್ಟತೆ ಇಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಆಂಧ್ರಸರ್ಕಾರದ ಪರ ವಾದಿಸಿದ ವಕೀಲ ಮಹಪೂಜ್ ನಜ್ಕಿ, 'ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಡಿಯಾಗಿರುವುದರಿಂದ ಜುಲೈ ಮೊದಲ ವಾರದಲ್ಲಿ 12ನೇ ತರಗತಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ' ಎಂದು ಹೇಳಿದರು.
ವಿಚಾರಣೆ ವೇಳೆ ಕೇರಳದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ 11ನೇ ತರಗತಿ ಪರೀಕ್ಷೆ ನಡೆಸುವುದಾಗಿ ಅಲ್ಲಿನ ಸರ್ಕಾರ ಕೋರ್ಟ್‌ಗೆ ತಿಳಿಸಿದೆ. ಅರ್ಜಿದಾರರ ಪರ ವಕೀಲರು ಮಧ್ಯಪ್ರವೇಶಿಸಿದಾಗ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಕೋವಿಡ್ 3ನೇ ಅಲೆ ತೀವ್ರವಾಗಿರುತ್ತದೆ ಎಂದು ದೆಹಲಿ ಏಮ್ಸ್ ನಿರ್ದೇಶಕರು ಎಚ್ಚರಿಸಿದ್ದಾರೆ. ಹೀಗಾಗಿ ಆ ಸಮಯದಲ್ಲಿ ಪರೀಕ್ಷೆಗಳನ್ನು ಹೇಗೆ ನಿಭಾಯಿಸುತ್ತೀರಿ ಎಂದು ನ್ಯಾಯಪೀಠ ಪ್ರಶ್ನಿಸಿದೆ. ಈ ಕುರಿತ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.
28 ರಾಜ್ಯಗಳ ಪೈಕಿ 6 ರಾಜ್ಯಗಳು ಈಗಾಗಲೇ ಬೋರ್ಡ್ ಪರೀಕ್ಷೆಯನ್ನು ನಡೆಸಿದ್ದು, 18 ರಾಜ್ಯಗಳು ರದ್ದು ಮಾಡಿವೆ. ಆದರೆ ಅಸ್ಸೋಂ, ಪಂಜಾಬ್, ತ್ರಿಪುರಾ ಹಾಗೂ ಆಂಧ್ರ ಪ್ರದೇಶ ಸರ್ಕಾರಗಳು ಮಾತ್ರ ಪರೀಕ್ಷೆ ರದ್ದು ಮಾಡಿಲ್ಲ.