ಪ್ರಯಾಗ್‌ರಾಜ್( ಉತ್ತರಪ್ರದೇಶ): ವಿವಾಹಿತ ಮಹಿಳೆ ಲೈಂಗಿಕ ಸಂಬಂಧದಲ್ಲಿ ಪೂರ್ವ ಅನುಭವ ಹೊಂದಿರುವ ಹಾಗೂ ಈ ಬಗ್ಗೆ ಯಾವುದೇ ಆಕ್ಷಪಣೆ ಇಲ್ಲದಿದ್ದರೆ, ಪುರುಷನೊಂದಿಗೆ ಆಕೆ ನಿಕಟ ಸಂಬಂಧ ಹೊಂದಲು ಒಪ್ಪಿಗೆ ಇಲ್ಲ ಎಂದು ಪರಿಭಾವಿಸಲು ಆಗುವುದಿಲ್ಲ ಎಂಬ ಅಂಶವನ್ನು ಅಲಹಾಬಾದ್ ಹೈಕೋರ್ಟ್ ಗಮನಿಸಿದೆ.
40ರ ಹರೆಯದ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹಾಕಲಾಗಿರುವ ಕ್ರಿಮಿನಲ್ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಈ ಅಂಶವನ್ನು ಪರಿಗಣಿಸಿದೆ. ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲೀವ್ ಇನ್ ಪಾರ್ಟನರ್: ಆಪಾದಿತ ಅತ್ಯಾಚಾರ ಸಂತ್ರಸ್ತೆ ತನ್ನ ಪತಿಯಿಂದ ವಿಚ್ಛೇದನ ಪಡೆಯದೇ ಮತ್ತು ತನ್ನ ಇಬ್ಬರು ಮಕ್ಕಳನ್ನು ಬಿಟ್ಟು, ಅರ್ಜಿದಾರ ರಾಕೇಶ್ ಯಾದವ್ ಅವರನ್ನು ಮದುವೆಯಾಗುವ ಉದ್ದೇಶದಿಂದ ಲಿವ್ - ಇನ್ ರಿಲೇಶನ್ ನಲ್ಲಿ ಇರಲು ನಿರ್ಧರಿಸಿರುವುದು ವಿಚಾರಣೆ ವೇಳೆ ಕೋರ್ಟ್ ಗಮನಕ್ಕೆ ಬಂದಿದೆ.
ನ್ಯಾಯಾಲಯ ಸಂಖ್ಯೆ III/ಜುಡಿಶಿಯಲ್ ಮ್ಯಾಜಿಸ್ಟ್ರೇಟ್, ಜೌನ್‌ಪುರದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ (ಜೂನಿಯರ್ ವಿಭಾಗ) ನ್ಯಾಯಾಲಯದ ಮುಂದೆ ತಮ್ಮ ವಿರುದ್ಧ ಸಲ್ಲಿಸಲಾದ ಚಾರ್ಜ್ ಶೀಟ್ ಅನ್ನು ವಜಾಗೊಳಿಸುವಂತೆ ಕೋರಿ ಮೂವರು ಪ್ರತಿವಾದಿಗಳು ಅಲಹಬಾದ್ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
2001 ರಲ್ಲಿ ಸಂತ್ರಸ್ತೆಯ ಮದುವೆಯಾಗಿತ್ತು. ಇಬ್ಬರ ದಾಂಪತ್ಯದ ಪರಿಣಾಮ ಇಬ್ಬರು ಮಕ್ಕಳಿದ್ದಾರೆ. ಆದರೆ ಇಬ್ಬರ ನಡುವೆ ಬಾಂಧವ್ಯ ಹದಗೆಟ್ಟಿತ್ತು. ಹೀಗಾಗಿ ಅರ್ಜಿದಾರ ರಾಕೇಶ್ ಯಾದವ್ (ಮೊದಲ ಅರ್ಜಿದಾರ) ಪರಿಸ್ಥಿತಿಯ ಲಾಭವನ್ನು ಪಡೆದಿದ್ದಾರೆ. ಈತ ಗಂಡ - ಹೆಂಡತಿಯ ಜಗಳದ ಲಾಭ ಪಡೆದು, ಸಂತ್ರಸ್ತೆಯನ್ನು ಮದುವೆ ಆಗುವ ಭರವಸೆ ನೀಡಿ, ಮನವೊಲಿಕೆ ಮಾಡಿದ್ದ. ಹೀಗಾಗಿ ಇಬ್ಬರು ಐದು ತಿಂಗಳ ಕಾಲ ಸಹ ಬಾಳ್ವೆ ನಡೆಸಿದ್ದರು. ಇದು ಮುಂದೆ ದೈಹಿಕ ಸಂಪರ್ಕಕ್ಕೂ ಕಾರಣವಾಗಿತ್ತು.
ಸಹ - ಆರೋಪಿಗಳಾದ ರಾಜೇಶ್ ಯಾದವ್ (ಎರಡನೇ ಅರ್ಜಿದಾರ) ಮತ್ತು ಲಾಲ್ ಬಹದ್ದೂರ್ (ಮೂರನೇ ಅರ್ಜಿದಾರ), ಕ್ರಮವಾಗಿ ಮೊದಲ ಅರ್ಜಿದಾರರ ಸಹೋದರ ಮತ್ತು ತಂದೆ ರಾಕೇಶ್ ಯಾದವ್ ಅವರ ವಿವಾಹಕ್ಕೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಮದುವೆ ಆಗಿದೆ ಎಂಬುದನ್ನು ನಿರೂಪಿಸಲು ಮಹಿಳೆಯಿಂದ ಸಾಮಾನ್ಯ ಸ್ಟಾಂಪ್ ಪೇಪರ್ ಮೇಲೆ ಸಹಿ ಪಡೆದುಕೊಂಡಿದ್ದರು. ಆದರೆ ವಾಸ್ತವವಾಗಿ ಈ ಮದುವೆ ಶಾಸ್ತ್ರೋಕ್ತವಾಗಿ ನಡೆಸಲಾಗಿಲ್ಲ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.
ಇನ್ನು ಎದುರಾಳಿ ಪರ ಅರ್ಜಿದಾರರು ವಾದಿಸಿ, ಸಂತ್ರಸ್ತ 40 ವರ್ಷದ ಮಹಿಳೆ 2 ಮಕ್ಕಳ ತಾಯಿ ಆಗಿದ್ದು, ಈ ಸಂಬಂಧದ ಸ್ವರೂಪ ಮತ್ತು ನೈತಿಕತೆಯ ಪ್ರಜ್ಞೆಯನ್ನು ಹೊಂದಿದ್ದರು ಎಂದು ಪ್ರತಿಪಾದಿಸಿದರು. ಇಬ್ಬರ ನಡುವೆ ಪರಸ್ಪರ ಒಪ್ಪಿಗೆ ಮೇಲೆ ಈ ದೈಹಿಕ ಸಂಪರ್ಕ ನಡೆದಿದೆ. ಹಾಗಾಗಿ ಇದನ್ನು ಅತ್ಯಾಚಾರ ಎನ್ನಲು ಬರುವುದಿಲ್ಲ. ಹೀಗಾಗಿ ಇದನ್ನು ಮೊದಲ ಅರ್ಜಿದಾರ ಮತ್ತು ಸಂತ್ರಸ್ತೆ ನಡುವಣ ಒಮ್ಮತದ ಸಂಬಂಧ ಎಂದು ಪರಿಗಣಿಸಬೇಕಾಗುತ್ತದೆ ಎಂದು ವಾದಿಸಿದರು.
ಈ ಪ್ರಕರಣದಲ್ಲಿ ಎರಡೂ ಕಡೆಯ ವಾದ ಆಲಿಸಿದ ಅಲಹಬಾದ್ ಹೈಕೋರ್ಟ್, ಕೆಳ ನ್ಯಾಯಾಲಯದಲ್ಲಿ ಅರ್ಜಿದಾರರ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ಮೊಕದ್ದಮೆಯನ್ನು ಅಮಾನತುಗೊಳಿಸಿದೆ. ಅಷ್ಟೇ ಅಲ್ಲ ಆರು ವಾರಗಳ ಅವಧಿಯಲ್ಲಿ ಪ್ರತಿವಾದಿಗಳು ಅಫಿಡವಿಟ್ (ಪ್ರತಿಕ್ರಿಯೆ) ಸಲ್ಲಿಸುವಂತೆ ಸೂಚಿಸಿದ್ದು, ಒಂಬತ್ತು ವಾರಗಳ ನಂತರ ಪ್ರಕರಣ ಕೈಗೆತ್ತಿಕೊಳ್ಳುವುದಾಗಿ ಹೇಳಿ ವಿಚಾರಣೆಯನ್ನು ಮುಂದೂಡಿದೆ.
ಇದನ್ನು ಓದಿ: ಜ್ಞಾನವಾಪಿ ಮಸೀದಿಯಲ್ಲಿ ಮುಂದುವರಿದ ಸರ್ವೆ ಕಾರ್ಯ..!