ಮುಂಬೈ (ಮಹಾರಾಷ್ಟ್ರ): ರಾಷ್ಟ್ರ ರಾಜಧಾನಿ ದೆಹಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ವಿರುದ್ಧ ಪ್ರತಿಪಕ್ಷಗಳನ್ನು ಒಟ್ಟುಗೂಡಿಸಲು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಸುಗ್ರೀವಾಜ್ಞೆಯನ್ನು ರಾಜ್ಯಸಭೆಯಲ್ಲಿ ವಿರೋಧಿಸಲು ಪ್ರತಿಪಕ್ಷಗಳ ನಾಯಕರ ಬೆಂಬಲವನ್ನು ಕೇಜ್ರಿವಾಲ್ ಕೇಳುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ಗುರುವಾರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿ ಸಹಕಾರ ಕೋರಿದರು.
ಹಿರಿಯ ರಾಜಕಾರಣಿ ಶರದ್ ಪವಾರ್ ಅವರೊಂದಿಗೆ ಮಾತುಕತೆ ನಡೆಸಲು ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ರಾಜ್ಯಸಭಾ ಸದಸ್ಯರಾದ ಸಂಜಯ್ ಸಿಂಗ್, ರಾಘವ್ ಚಡ್ಡಾ ಹಾಗೂ ದೆಹಲಿ ಸಚಿವೆ ಅತಿಶಿ ಅವರೊಂದಿಗೆ ಮಹಾರಾಷ್ಟ್ರ ರಾಜಧಾನಿ ಮುಂಬೈಗೆ ಆಗಮಿಸಿದರು. ಶರದ್ ಪವಾರ್ ಸೇರಿ ಎನ್‌ಸಿಪಿ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು.
ಇಡೀ ದೇಶಕ್ಕೆ ಒಂದು ಸಂದೇಶ ರವಾನೆ: ನಂತರ ಶರದ್ ಪವಾರ್ ಅವರೊಂದಿಗೆ ಅರವಿಂದ್ ಕೇಜ್ರಿವಾಲ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯಸಭೆಯಲ್ಲಿ ರಾಷ್ಟ್ರ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ ರಚನೆ ಕುರಿತು ಸುಗ್ರೀವಾಜ್ಞೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ಅಂಗೀಕಾರ ಮಾಡಿಕೊಳ್ಳಲು ವಿಫಲವಾದರೆ ಇಡೀ ದೇಶಕ್ಕೆ ಒಂದು ಸಂದೇಶ ರವಾನೆಯಾಗಲಿದೆ. 2024ರ ಲೋಕಸಭಾ ಚುನಾವಣೆಯ ನಂತರ ನರೇಂದ್ರ ಮೋದಿ ಸರ್ಕಾರವು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಇದು ಸೂಚಿಸುತ್ತದೆ ಎಂದು ಕೇಜ್ರಿವಾಲ್ ಹೇಳಿದರು.
ರಾಜ್ಯಸಭೆಯಲ್ಲಿ ಮಸೂದೆ ಸೋಲಿಸಲು ಎನ್‌ಸಿಪಿ ನಮಗೆ ಬೆಂಬಲ ನೀಡುತ್ತದೆ ಎಂದು ಶರದ್ ಪವಾರ್ ನಮಗೆ ಭರವಸೆ ನೀಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣಕ್ಕೆ ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧ ನಾವು ಎಲ್ಲ ಬಿಜೆಪಿಯೇತರ ಪಕ್ಷಗಳಿಂದ ಬೆಂಬಲವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ. ಮೇಲ್ಮನೆಯಲ್ಲಿ ತಮ್ಮ ಪಕ್ಷವನ್ನು ಬೆಂಬಲಿಸುವ ಭರವಸೆ ನೀಡಿರುವುದಕ್ಕಾಗಿ ಪವಾರ್ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ದೆಹಲಿ ಸಿಎಂ ತಿಳಿಸಿದರು.
ಇದನ್ನೂ ಓದಿ: ಕೇಂದ್ರದ ಸುಗ್ರೀವಾಜ್ಞೆಗೆ ಕೇಜ್ರಿವಾಲ್ ವಿರೋಧ... ಮೋದಿ ವಿರುದ್ಧ ಹೋರಾಟಕ್ಕೆ ಮಮತಾ ಸಾಥ್!
ದೆಹಲಿಗೆ ಸಂಬಂಧಿಸಿದ ಮಸೂದೆಯು ರಾಜ್ಯಸಭೆಗೆ ಬಂದಾಗ ಅದನ್ನು ಸದನದಲ್ಲಿ ಮಸೂದೆಯನ್ನು ಅಂಗೀಕರಿಸಲು ಬಿಡುವುದಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ. ಎಲ್ಲ ಬಿಜೆಪಿಯೇತರ ಪಕ್ಷಗಳು ಒಗ್ಗೂಡಿದರೆ ಈ ಮಸೂದೆ ವಿಫಲವಾಗಬಹುದು. ಇದು ದೆಹಲಿಯ ಹೋರಾಟವಲ್ಲ, ಬದಲಿಗೆ ಒಕ್ಕೂಟ ರಚನೆ ಒಳಿಗಾಗಿ ಹೋರಾಟವಾಗಿದೆ. ಬಿಜೆಪಿಗೆ ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗದಿದ್ದರೆ, ಇದನ್ನೇ 2024ರ ಸೆಮಿಫೈನಲ್ ಎಂದು ಪರಿಗಣಿಸಬೇಕು. 2024ರಲ್ಲಿ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸಂದೇಶವನ್ನೂ ಇದು ನೀಡುತ್ತದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ಖರ್ಗೆ - ರಾಹುಲ್ ಭೇಟಿಗೆ ಸಮಯ: ಇದೇ ವೇಳೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕತ್ವವನ್ನು ಭೇಟಿಯಾಗಿ ಬೆಂಬಲ ಕೋರುತ್ತೀರಾ ಎಂಬ ಪ್ರಶ್ನೆಗೆ ಕೇಜ್ರಿವಾಲ್, ಈ ವಿಷಯದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಸಮಯ ಕೇಳುವುದಾಗಿ ಸ್ಪಷ್ಟಪಡಿಸಿದರು. ಶರದ್ ಪವಾರ್ ಮಾತನಾಡಿ, ದೇಶದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಇದೆ. ಇದು ದೆಹಲಿಗೆ ಸೀಮಿತವಾದ ವಿಷಯವಲ್ಲ. ಎನ್‌ಸಿಪಿ ಮತ್ತು ಮಹಾರಾಷ್ಟ್ರದ ಜನರು ಕೇಜ್ರಿವಾಲ್ ಅವರನ್ನು ಬೆಂಬಲಿಸುತ್ತಾರೆ. ಕೇಜ್ರಿವಾಲ್ ಅವರನ್ನು ಬೆಂಬಲಿಸಲು ನಾವು ಇತರ ನಾಯಕರೊಂದಿಗೂ ಮಾತನಾಡುತ್ತೇವೆ. ನಾವು ಎಲ್ಲ ಬಿಜೆಪಿಯೇತರ ಪಕ್ಷಗಳನ್ನು ಒಟ್ಟಿಗೆ ತರುವತ್ತ ಗಮನ ಹರಿಸಬೇಕೆಂದು ಹೇಳಿದರು.
ಇದಕ್ಕೂ ಮುನ್ನ ಬುಧವಾರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಕೇಜ್ರಿವಾಲ್ ಭೇಟಿ ಮಾಡಿದ್ದರು. ಮಂಗಳವಾರ ಕೋಲ್ಕತ್ತಾದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಸುಗ್ರೀವಾಜ್ಞೆ ವಿರೋಧಿಸಲು ಬೆಂಬಲ ಕೋರಿದ್ದರು.
ಇದನ್ನೂ ಓದಿ: ಸುಪ್ರೀಂಕೋರ್ಟ್ಗೆ ಕೇಂದ್ರ ಅಪಮಾನ ಮಾಡಿದೆ... ಸುಗ್ರೀವಾಜ್ಞೆ ಪ್ರಶ್ನಿಸಿ ಅರ್ಜಿ ಸಲ್ಲಿಸುತ್ತೇವೆ: ಕೇಜ್ರಿವಾಲ್