ಚೆನ್ನೈ: ತಮಿಳುನಾಡಿನ ಕುಖ್ಯಾತ ವಿಗ್ರಹ ಕಳ್ಳಸಾಗಣೆದಾರ ಶುಭಾಷ್ಚಂದ್ರ ಕಪೂರ್ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕುಂಭಕೋಣಂನಲ್ಲಿರುವ ವಿಶೇಷ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2000 ರಲ್ಲಿ ವರದರಾಜ ಪೆರುಮಾಳ್ ದೇವಸ್ಥಾನದಿಂದ 19 ಪ್ರಾಚೀನ ದೇವತೆಗಳ ಪಂಚಲೋಹದ ವಿಗ್ರಹಗಳನ್ನು ಕದ್ದ ಆರೋಪ ಅಂತಾರಾಷ್ಟ್ರೀಯ ಸ್ಲಗ್ಲರ್ ಶುಭಾಷ್ಚಂದ್ರ ಕಪೂರ್ ಮೇಲಿತ್ತು.
ಆ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ. ಪ್ರಮುಖ ಆರೋಪಿ ಕಪೂರ್ ಜೊತೆಗೆ ಅವರ ಇಬ್ಬರು ಸಹಚರರಿಗೂ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ವಿಶೇಷ ನ್ಯಾಯಾಲಯವು ಕಪೂರ್ ಮತ್ತು ಇತರರಿಗೆ ತಲಾ 8,000 ರೂಪಾಯಿ ದಂಡ ಸಹ ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಷಣ್ಮುಘ ಪ್ರಿಯಾ, ಅವರೆಲ್ಲರನ್ನೂ ತಪ್ಪಿತಸ್ಥರೆಂದು ಪರಿಗಣಿಸಿ ತೀರ್ಪಿತ್ತರು. ಅವರು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ನಾಶಪಡಿಸುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಏನಿದು ಪ್ರಕರಣ?: 2000ನೇ ಇಸವಿಯಲ್ಲಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದರೂ, 2008ರಲ್ಲಿ ಉದಯರಪಾಳ್ಯಂ ಪೊಲೀಸರೊಂದಿಗೆ ವಿಗ್ರಹ ಕಳ್ಳತನ ಪ್ರಕರಣ ದಾಖಲಿಸಿತ್ತು. ಕಪೂರ್ ಅಮೆರಿಕ ಪ್ರಜೆಯಾಗಿರುವುದರಿಂದ ತನಿಖೆಗೆ ಅಡ್ಡಿಯಾಗಿತ್ತು. ಕಪೂರ್ ಅಲ್ಲದೇ, ಅಪರಾಧದಲ್ಲಿ ಭಾಗಿಯಾದ ಸಂಜೀವಿ ಅಶೋಕನ್, ಮಾರಿಚಾಮಿ, ಪಕ್ಕಿಯ ಕುಮಾರ್, ಶ್ರೀರಾಮ್ ಅಲಿಯಾಸ್ ಉಲಗು ಮತ್ತು ಪಾರ್ತಿಬನ್ ಎಂಬ ಆರು ಮಂದಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.
ಅವರಲ್ಲಿ ಕಪೂರ್ ಮತ್ತು ಪಕ್ಕಿಯಾ ಕುಮಾರ್ ಜೈಲಿನಲ್ಲಿದ್ದರೆ, ಇತರರು ಜಾಮೀನಿನ ಮೇಲೆ ಇದ್ದಾರೆ. ಮತ್ತೋರ್ವ ಆರೋಪಿ ಪಿಚ್ಚುಮಣಿ ಅನುಮೋದಕನಾಗಿದ್ದ. 2012 ರಿಂದ 2016 ರವರೆಗೆ, ಜಯಂಕೊಂಡಂನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿತ್ತು. ನಂತರ ACJM, ವಿಗ್ರಹ ಕಳ್ಳತನ ಪ್ರಕರಣಗಳ ವಿಶೇಷ ನ್ಯಾಯಾಧೀಶರ ಮುಂದೆ ಪ್ರಕರಣ ವರ್ಗಾವಣೆ ಮಾಡಲಾಗಿತ್ತು. ತೀರ್ಪಿನ ಬಳಿಕ ಎಲ್ಲರನ್ನೂ ತಿರುಚ್ಚಿ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ.
ಜರ್ಮನಿ, ಅಮೆರಿಕದಲ್ಲಿ ಪ್ರಕರಣ ಬಾಕಿ: ಕಪೂರ್ ವಿರುದ್ಧ ಜರ್ಮನಿ ಮತ್ತು ಅಮೆರಿಕದಲ್ಲಿ ಪ್ರಕರಣಗಳು ಬಾಕಿ ಇವೆ. ಆದ್ದರಿಂದ ಎರಡೂ ದೇಶಗಳು ಅವರನ್ನು ವಾಪಸ್ ಕಳುಹಿಸುವಂತೆ ಒತ್ತಾಯಿಸುತ್ತಿವೆ. ಅಪರಾಧಿ ಕಪೂರ್ನನ್ನು ವಶಕ್ಕೆ ಪಡೆದು ಭಾರತಕ್ಕೆ ಹಸ್ತಾಂತರಿಸಿರುವ ಜರ್ಮನಿ, ವಿದೇಶಾಂಗ ಸಚಿವಾಲಯದ ಬಳಿ ಈ ಕುರಿತು ಒತ್ತಡ ಹೇರುತ್ತಿದೆ.
ಈ ಸಂಬಂಧ ತಮಿಳುನಾಡು ಮುಖ್ಯ ಕಾರ್ಯದರ್ಶಿ ವಿ ಇರಾಯನ್ಬು ಅವರಿಗೆ ಪತ್ರ ಬರೆದಿದೆ. ಪೊಲೀಸ್ ಮೂಲಗಳ ಪ್ರಕಾರ, ಕಪೂರ್ ಇತರ ಪ್ರಕರಣಗಳನ್ನು ಎದುರಿಸದಿರಬಹುದು ಮತ್ತು ಬಹುಶಃ ಅಮೆರಿಕಕ್ಕೆ ಗಡೀಪಾರು ಮಾಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಇದನ್ನು ಓದಿ:ಮದುವೆಗೆ ಇದ್ದ ವಿಘ್ನ ನಿವಾರಣೆಗೆ ಬಾಲಕಿ ಮೇಲೆ ಅತ್ಯಾಚಾರ.. ಶಿಕ್ಷಕನಿಗೆ ಮಾಂತ್ರಿಕ ನೀಡಿದ ಆ ದುಷ್ಟ ಸಲಹೆ ಏನು?