ಮುಂಬೈ: ಸಿಬಿಐ ತನಿಖೆ ನಡೆಸುತ್ತಿರುವ ಐಸಿಐಸಿಐ ಬ್ಯಾಂಕ್ - ವಿಡಿಯೋಕಾನ್ ಸಾಲ ವಂಚನೆ ಪ್ರಕರಣದಲ್ಲಿ ಜಾಮೀನು ಕೋರಿ ವಿಡಿಯೋಕಾನ್ ಗ್ರೂಪ್ ಅಧ್ಯಕ್ಷ ವೇಣುಗೋಪಾಲ್ ಧೂತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಶುಕ್ರವಾರ ತನ್ನ ಆದೇಶವನ್ನು ಕಾಯ್ದಿರಿಸಿದೆ. ಇದಕ್ಕೂ ಮುನ್ನ, ವಿಡಿಯೋಕಾನ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಮಂಗಳವಾರ ಜೈಲಿನಿಂದ ಬಿಡುಗಡೆಯಾಗಿದ್ದರು.
ಇವರಿಬ್ಬರ ಬಂಧನವು ಕಾನೂನಿಗೆ ಅನುಸಾರವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಉಚ್ಚ ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು. ಅದಾಗಿ ಒಂದು ದಿನದ ನಂತರ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು. ಕೊಚ್ಚರ್ ದಂಪತಿಯನ್ನು ಕಳೆದ ವರ್ಷ ಡಿಸೆಂಬರ್ 23 ರಂದು ಬಂಧಿಸಲಾಗಿತ್ತು. ಆರು ದಿನಗಳ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು .
ಅಫಿಡವಿಟ್ ಸಲ್ಲಿಸುವಂತೆ ಸಿಬಿಐಗೆ ಕೋರ್ಟ್ ಸೂಚನೆ: ಪ್ರಕರಣದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ, ತನ್ನ ಬಂಧನವನ್ನು ನಿರಂಕುಶ ಮತ್ತು ಕಾನೂನುಬಾಹಿರ ಎಂದು ಘೋಷಿಸಿ ಜಾಮೀನು ನೀಡುವಂತೆ ಕೋರಿ ಧೂತ್ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಜನವರಿ 13 ರೊಳಗೆ ತನ್ನ ಅಫಿಡವಿಟ್ ಸಲ್ಲಿಸುವಂತೆ ಸಿಬಿಐಗೆ ಹೈಕೋರ್ಟ್ ಸೂಚಿಸಿದೆ. ಡಿಸೆಂಬರ್ 26, 2022 ರಂದು ಸಿಬಿಐನಿಂದ ಬಂಧಿಸಲ್ಪಟ್ಟ ವೇಣುಗೋಪಾಲ್ ಧೂತ್, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಥಮ ಮಾಹಿತಿ ವರದಿ ವಜಾಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಮತ್ತು ಮಧ್ಯಂತರ ಜಾಮೀನು ಸಹ ಕೋರಿದ್ದಾರೆ.
ಧೂತ್ ಪರ ವಕೀಲ ಸಂದೀಪ್ ಲಡ್ಡಾ ವಾದ ಮಂಡನೆ: ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪಿ ಕೆ ಚವಾಣ್ ಅವರ ವಿಭಾಗೀಯ ಪೀಠವು ವೇಣುಗೋಪಾಲ್ ಧೂತ್ ಅವರ ವಕೀಲ ಸಂದೀಪ್ ಲಡ್ಡಾ ಮತ್ತು ಸಿಬಿಐ ಪರ ವಕೀಲ ರಾಜಾ ಠಾಕರೆ ಇಬ್ಬರನ್ನೂ ಆಲಿಸಿದ ನಂತರ ಮಧ್ಯಂತರ ಪರಿಹಾರದ ಆದೇಶವನ್ನು ಕಾಯ್ದಿರಿಸಿದೆ. 2017ರ ಡಿಸೆಂಬರ್‌ನಲ್ಲಿ 'ಪ್ರಾಥಮಿಕ ವಿಚಾರಣೆ' (ಪಿಇ) ದಾಖಲಿಸಿದಾಗಿನಿಂದ ವೇಣುಗೋಪಾಲ್ ಧೂತ್ ಸಿಬಿಐ ಮುಂದೆ 31 ಬಾರಿ ಹಾಜರಾಗಿದ್ದಾರೆ ಎಂದು ವಕೀಲ ಸಂದೀಪ್ ಲಡ್ಡಾ ವಾದಿಸಿದರು.
ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಗಳಡಿ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ 2019 ರಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಕೊಚ್ಚರ್ ದಂಪತಿ, ಧೂತ್, ದೀಪಕ್ ಕೊಚ್ಚರ್ ನಿರ್ವಹಿಸುತ್ತಿರುವ ನುಪವರ್ ರಿನಿವೇಬಲ್ಸ್ (ಎನ್‌ಆರ್‌ಎಲ್), ಸುಪ್ರೀಂ ಎನರ್ಜಿ, ವಿಡಿಯೋಕಾನ್ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಈ ಕಂಪನಿಗಳನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
2009 ರಿಂದ 2018 ರವರೆಗೆ ಚಂದಾ ಕೊಚ್ಚರ್ ನೇತೃತ್ವದ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್, ನಿಯಮಾವಳಿಗಳನ್ನು ಉಲ್ಲಂಘಿಸಿ ಈ ಕಂಪನಿಗಳಿಗೆ 3,250 ಕೋಟಿ ರೂಪಾಯಿಗಳ ಸಾಲ ಸೌಲಭ್ಯಗಳನ್ನು ಮಂಜೂರು ಮಾಡಿದೆ ಎಂದು ಸಿಬಿಐ ಹೇಳಿದೆ. ಸುಪ್ರೀಮ್ ಎನರ್ಜಿ ಪ್ರೈವೇಟ್ ಲಿಮಿಟೆಡ್ (ಎಸ್‌ಇಪಿಎಲ್) ಮೂಲಕ ನುಪವರ್‌ನಲ್ಲಿ 64 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಮತ್ತು ಎಸ್‌ಇಪಿಎಲ್ ಅನ್ನು 2010 ಮತ್ತು 2012 ರ ನಡುವೆ ಸರ್ಕ್ಯೂಟ್ ರೂಟ್ ಮೂಲಕ ದೀಪಕ್ ಕೊಚ್ಚರ್ ನಿರ್ವಹಿಸುತ್ತಿದ್ದ ಪಿನಾಕಲ್ ಎನರ್ಜಿ ಟ್ರಸ್ಟ್‌ಗೆ ವರ್ಗಾಯಿಸಿದ್ದಾರೆ ಎಂಬ ಆರೋಪವೂ ಧೂತ್ ಮೇಲಿದೆ.
ಇದನ್ನೂ ಓದಿ: ಐಸಿಐಸಿಐ ಮಾಜಿ ಸಿಇಒ ಚಂದಾ ಕೊಚ್ಚರ್, ಪತಿ ದೀಪಕ್‌ಗೆ ಜಾಮೀನು ಮಂಜೂರು