ಜೈಪುರ: ಸುಮಾರು ಎರಡು ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ್ದ ಐಎಎಸ್ ದಂಪತಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ.
ಟೀನಾ ದಾಬಿ ಮತ್ತು ಅವರ ಪತಿ ಅಥರ್ ಅಮೀರ್ ಖಾನ್ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನಕ್ಕಾಗಿ ಜೈಪುರದ ಕುಟುಂಬ ನ್ಯಾಯಾಲಯದಲ್ಲಿ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ. ದಾಬಿ ಮತ್ತು ಖಾನ್ 2018ರಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
2015ರಲ್ಲಿ ನಡೆದ ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ದಾಬಿ ಅಗ್ರಸ್ಥಾನ ಪಡೆದಿದ್ದರೆ, ಕಾಶ್ಮೀರ ಮೂಲದ ಖಾನ್ ಎರಡನೇ ಸ್ಥಾನ ಗಳಿಸಿದ್ದರು.
ಇತ್ತೀಚೆಗೆ ಸೋಶಿಯಲ್ ಮೀಡಿಯಾ ಅಕೌಂಟ್ಗಳಲ್ಲಿ ತನ್ನ ಉಪನಾಮವಾದ 'ಖಾನ್' ಪದವನ್ನು ದಾಬಿ ತೆಗೆದಿದ್ದರು. ಈ ವಿಷಯ ಗೊತ್ತಾಗಿ ಅಥರ್ ಕೂಡ ಇನ್ಸ್ಟಾಗ್ರಾಂನಲ್ಲಿ ಟೀನಾರನ್ನು ಅನ್ಫಾಲೋ ಮಾಡಿದ್ದರು. ಇದು ದಂಪತಿ ಮಧ್ಯೆ ಮನಸ್ತಾಪ ಹುಟ್ಟುಹಾಕಿತ್ತು ಎನ್ನಲಾಗಿದೆ.
ಆರಂಭದಲ್ಲಿ ಇಬ್ಬರೂ ಒಂದೇ ನಗರದಲ್ಲಿದ್ದರು. ಆದರೆ, ಟೀನಾ ದಾಬಿರನ್ನು ಕೆಲವು ದಿನಗಳ ಬಳಿಕ ಶ್ರೀಗಂಗನಗರಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಯಿತು. ಇದರ ಬೆನ್ನಲ್ಲೆ ಅಥರ್ ಅವರನ್ನು ಕೂಡ ಜೈಲಾ ಪರಿಷತ್ ಸಿಇಒ ಆಗಿ ಜೈಪುರಕ್ಕೆ ನೇಮಿಸಲಾಯಿತು.
2018ರಲ್ಲಿ ಐಎಎಸ್ ಟಾಪರ್ಗಳಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಹುಟ್ಟುಹಾಕಿದ್ದರು. ಇದೀಗ ಟೀನಾ ದಾಬಿ ಮತ್ತು ಅವರ ಪತಿ ಅಥರ್ ಅಮೀರ್ ಖಾನ್ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಸಿದ್ಧರಾಗಿದ್ದಾರೆ.