ಕೊಟ್ಟಾಯಂ(ಕೇರಳ): ನಾಗರಹಾವು ಕಡಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕೇರಳದ ಖ್ಯಾತ ಉರಗತಜ್ಞ ವಾವಾ ಸುರೇಶ್ ಅವರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ವೇಳೆ ಈಟಿವಿ ಭಾರತ್ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹಾವು ಹಿಡಿಯುವುದಕ್ಕೆ ನಾನು ಯಾವುದೇ ನಿರ್ದಿಷ್ಟ ಶೈಲಿ ಹೊಂದಿಲ್ಲ ಎಂದಿರುವ ಅವರು, ಕೊನೆ ಉಸಿರು ಇರುವವರೆಗೂ ಹಾವು ಹಿಡಿಯುವುದನ್ನ ನಿಲ್ಲಿಸುವುದಿಲ್ಲ ಎಂದಿದ್ದಾರೆ. ಹಾವು ಹಿಡಿಯುವುದರಿಂದಲೇ ಜನರು ನನ್ನನ್ನು ಪ್ರೀತಿಸುತ್ತಾರೆ. ಹಾವು ಹಿಡಿಯುವ ನನ್ನ ಶೈಲಿ ಸರಿಯಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಟೀಕೆ ಕೇಳಿ ಬರುತ್ತಿದ್ದು, ಅದಕ್ಕೆ ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ.
ಇದು ನನ್ನ ಪುನರ್ಜನ್ಮ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿರುವ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನರಿಗೆ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿರಿ: ಕೇರಳ : ನಾಗರಹಾವು ಕಡಿತಕ್ಕೊಳಗಾದ ಖ್ಯಾತ ಉರಗ ತಜ್ಞ ವಾವಾ ಸುರೇಶ್ ಆರೋಗ್ಯದಲ್ಲಿ ಚೇತರಿಕೆ
ಹಾವು ಕಡಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು. ವೈಜ್ಞಾನಿಕವಾಗಿ ನಾನು ಹಾವು ಹಿಡಿಯುವುದಿಲ್ಲ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ. ಆದರೆ, ನಾನು ಯಾವುದೇ ಕಾರಣಕ್ಕೂ ಹಾವು ಹಿಡಿಯುವುದನ್ನ ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೇರಳದ ಸ್ನೇಕ್ ಮ್ಯಾನ್ ಎಂದು ಮನೆ ಮಾತಾಗಿರುವ 48 ವರ್ಷದ ವಾವಾ ಸುರೇಶ್ ಇಲ್ಲಿಯವರೆಗೆ 50 ಸಾವಿರಕ್ಕೂ ಅಧಿಕ ಹಾವುಗಳನ್ನ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.