ಮಥುರಾ(ಉತ್ತರ ಪ್ರದೇಶ): ಸದಾ ಒಂದಿಲ್ಲೊಂದು ವಿವಾದಕ್ಕೆ ಸಿಲುಕುವ ಬಾಲಿವುಡ್ ನಟಿ ಕಂಗನಾ ರಣಾವತ್, ನಾನು ಯಾವುದೇ ಪಕ್ಷಕ್ಕೆ ಸೇರಿಲ್ಲ, ಆದರೆ ರಾಷ್ಟ್ರೀಯವಾದಿಗಳ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಶ್ರೀಕೃಷ್ಣ ಜನ್ಮಸ್ಥಾನ್ ದೇವಾಲಯಕ್ಕೆ ಭೇಟಿ ನೀಡಿದ ವೇಳೆ 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಂಗನಾ, ನಾನು ಯಾವುದೇ ಪಕ್ಷಕ್ಕೆ ಸೇರಿಲ್ಲ. ಯಾರು ರಾಷ್ಟ್ರೀಯವಾದಿಗಳಾಗಿರುತ್ತಾರೋ ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.
ಶ್ರೀಕೃಷ್ಣ ಇರಬೇಕಾದ ಸ್ಥಳದಲ್ಲಿ ಈದ್ಗಾ ಇದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶ್ರೀಕೃಷ್ಣನ 'ನಿಜವಾದ ಜನ್ಮಸ್ಥಳ'ವನ್ನು ಜನರಿಗೆ ತೋರಿಸಲು ಪ್ರಯತ್ನಿಸುತ್ತಾರೆ ಎಂದು ಭಾವಿಸುತ್ತೇನೆ ಎಂದರು. ತಮ್ಮ ಹೇಳಿಕೆಗಳು ಕೆಲವರ ಭಾವನೆಗಳಿಗೆ ಧಕ್ಕೆ ತಂದಿವೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ಪ್ರಾಮಾಣಿಕರು, ಧೈರ್ಯಶಾಲಿಗಳು, ರಾಷ್ಟ್ರೀಯತಾವಾದಿಗಳು ಮತ್ತು ದೇಶದ ಪರ ಮಾತನಾಡುವವರಿಗೆ ನಾನು ಹೇಳಿದ್ದು ಸರಿಯಾಗಿರುತ್ತದೆ ಎಂಬುದು ತಿಳಿದಿರುತ್ತದೆ ಎಂದರು.
ಚಂಡೀಗಢದಲ್ಲಿ ಕಾರನ್ನು ರೈತರು ತಡೆದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಕಂಗನಾ, ನಾನು ಅವರಲ್ಲಿ ಕ್ಷಮೆಯಾಚಿಸಿಲ್ಲ. ಅವರು ಕಾರನ್ನು ತಡೆದಿದ್ದಕ್ಕೆ ನಾನು ಪ್ರತಿಭಟಿಸಿದೆ ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ: 'The Good News' ಮೂಲಕ ಕಾಶ್ಮೀರದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯದ ಸಂದೇಶ..