ಹೈದರಾಬಾದ್ (ತೆಲಂಗಾಣ) : ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬರೋಬ್ಬರಿ 25 ವರ್ಷಗಳ ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಮಹಿಳೆಯೋರ್ವಳು, ನಾನು ಆತನೊಂದಿಗೆ ಇರಲು ಸಾಧ್ಯವಿಲ್ಲ ಎಂದು ಕಟ್ಟಿಕೊಂಡ ಗಂಡನ ವಿರುದ್ಧ ದೂರು ದಾಖಲಿಸಿದ್ದಾಳೆ. ಇದರಿಂದ ಪೊಲೀಸ್ ಇಲಾಖೆ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.
ಕಳೆದ 25 ವರ್ಷಗಳ ಹಿಂದೆ ಯುವತಿಯೋರ್ವಳು ತಮ್ಮ ಪೋಷಕರು ಗೊತ್ತು ಮಾಡಿದ್ದ ಯುವಕನೊಂದಿಗೆ ಮದುವೆ ಮಾಡಿಕೊಂಡಿದ್ದಳು. ಇದಾದ ಬಳಿಕ ಇಬ್ಬರು ಅಮೆರಿಕಕ್ಕೆ ತೆರಳಿದ್ದಾರೆ. ಅಲ್ಲಿನ ಪ್ರತಿಷ್ಠಿತ IT ಕಂಪನಿವೊಂದರಲ್ಲಿ ಕೆಲಸ ಮಾಡ್ತಿದ್ದರು. ಮಹಿಳೆ ಕಳೆದ ಕೆಲ ದಿನಗಳ ಹಿಂದೆ ಅಮೆರಿಕದಿಂದ ಹೈದರಾಬಾದ್ಗೆ ವಾಪಸ್ ಆಗಿದ್ದು, ಸೈಬರಾಬಾದ್ ಪೊಲೀಸರಿಗೆ ತನ್ನ ಗಂಡನ ವಿರುದ್ಧ ದೂರು ನೀಡಿದ್ದಾಳೆ.
ಇದನ್ನೂ ಓದಿ: UPSCಯಲ್ಲಿ ಶೃತಿ ಶರ್ಮಾ ಟಾಪರ್..ಕರ್ನಾಟಕದ 25 ಅಭ್ಯರ್ಥಿಗಳು ಪಾಸ್.. ಅಭಿನಂದನೆ ಸಲ್ಲಿಸಿದ ನಮೋ
ಯಾವ ಕಾರಣಕ್ಕಾಗಿ ದೂರು?: ಮದುವೆ ಮಾಡಿಕೊಂಡ ಮೊದಲ ದಿನದಿಂದಲೂ ತಾನು ಮಾನಸಿಕ ಕಿರುಕುಳ ಅನುಭವಿಸಿದ್ದೇನೆ. ಆದರೆ, ಅಮೆರಿಕದಲ್ಲಿದ್ದ ಕಾರಣ ಯಾವುದೇ ರೀತಿಯ ಕ್ರಮಕೈಗೊಳ್ಳಲು ಸಾಧ್ಯವಾಗಲಿಲ್ಲ. ಮಕ್ಕಳಾದ ಬಳಿಕ ಕೂಡ ಆತನ ವರ್ತನೆಯಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ.
ಇದೀಗ ಅವರೆಲ್ಲರೂ ಮದುವೆ ಮಾಡಿಕೊಂಡಿದ್ದಾನೆ. ಉಳಿದ ಜೀವನವನ್ನ ನೆಮ್ಮದಿಯಾಗಿ ಕಳೆಯುವ ಉದ್ದೇಶದಿಂದ ಈ ದೂರು ದಾಖಲು ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾಳೆ. ದೂರು ನೀಡುವ ಉದ್ದೇಶದಿಂದಲೇ ನಾನು ಭಾರತಕ್ಕೆ ಬಂದಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಮಹಿಳೆ ನೀಡಿರುವ ದೂರಿನನ್ವಯ ಆರೋಪಿ ಪತಿಯನ್ನ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ತನ್ನ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡಿರುವುದಾಗಿ ಆತ ಕೇಳಿಕೊಂಡಿದ್ದಾನೆ. ಆದರೆ, ಇದಕ್ಕೆ ಮಹಿಳೆ ಒಪ್ಪಿಕೊಂಡಿಲ್ಲ ಎನ್ನಲಾಗ್ತಿದೆ. ಕಳೆದ 25 ವರ್ಷಗಳಿಂದ ಮಾನಸಿಕ ಕಿರುಕುಳ ಅನುಭವಿಸಿದ್ದೇನೆ. ಮಕ್ಕಳಿಗೋಸ್ಕರ ನಾನು ಎಲ್ಲವನ್ನ ಸಹಿಸಿಕೊಂಡಿದ್ದೇನೆ. ಆದರೆ, ಇನ್ಮುಂದೆ ನಾನು ಆತನೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.