ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಅವರನ್ನು ದೆಹಲಿಯ ಅವರ ಕಚೇರಿಯಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿತೀಶ್ ಕುಮಾರ್, ತಾವು ಪ್ರಧಾನಿ ಅಭ್ಯರ್ಥಿ ಎಂಬ ಬಗೆಗಿನ ಊಹಾಪೋಹಗಳನ್ನು ನಿರಾಕರಿಸಿದರು. ನಾನು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ, ಅದನ್ನು ಬಯಸುವುದೂ ಇಲ್ಲ ಎಂದು ಹೇಳಿದರು.
ನಾವೆಲ್ಲ ಒಟ್ಟಾಗಿರುವುದರಿಂದ ನಾನಿಲ್ಲಿಗೆ ಆಗಮಿಸಿದ್ದೇನೆ. ವಿವಿಧ ಪಕ್ಷಗಳು ಒಟ್ಟಾಗಿ ಸೇರಿದರೆ ಅದೊಂದು ದೊಡ್ಡ ಬದಲಾವಣೆಗೆ ಕಾರಣವಾಗಲಿದೆ ಎಂದು ಅವರು ತಿಳಿಸಿದರು. ವಿವಿಧ ರಾಜ್ಯಗಳಲ್ಲಿನ ಎಡಪಕ್ಷಗಳು, ಪ್ರಾದೇಶಿಕ ಪಕ್ಷಗಳು ಮತ್ತು ಕಾಂಗ್ರೆಸ್ ಒಟ್ಟಾದರೆ ಅದೊಂದು ದೊಡ್ಡ ವಿಷಯವಾಗಲಿದೆ ಎಂದು ಅವರು ತಿಳಿಸಿದರು.
ಇಂದು ಬೆಳಗ್ಗೆ ನಿತೀಶ್ ಕುಮಾರ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ಮುಂಬರುವ 2024 ರ ಲೋಕಸಭೆ ಚುನಾವಣೆಯ ಕಾರ್ಯತಂತ್ರ ಮತ್ತು ಸಮಾನ ಮನಸ್ಕ ಪಕ್ಷಗಳನ್ನು ಒಟ್ಟಿಗೆ ತರುವ ಸಾಧ್ಯತೆಯ ಬಗ್ಗೆ ಚರ್ಚಿಸಿದರು. ಕಾಂಗ್ರೆಸ್ ಮೂಲಗಳ ಪ್ರಕಾರ, ಬಿಹಾರದಲ್ಲಿ ಕಾಂಗ್ರೆಸ್ ಭಾಗವಾಗಿರುವ ಮಹಾಘಟಬಂಧನದೊಂದಿಗೆ ಮತ್ತೆ ಜೊತೆಗೂಡಿದ ನಂತರ ಮೊದಲ ಬಾರಿಗೆ ಗಾಂಧಿಯನ್ನು ಭೇಟಿ ಮಾಡಿದ ಕುಮಾರ್, ತಮ್ಮ ಸರ್ಕಾರಕ್ಕೆ ಪಕ್ಷದ ಬೆಂಬಲ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಬಿಹಾರ ಮುಖ್ಯಮಂತ್ರಿಗಳು ದೆಹಲಿ ಪ್ರವಾಸದ ವೇಳೆ ಕರ್ನಾಟಕದ ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡಿದ್ದಾರೆ. ಪ್ರತಿಪಕ್ಷಗಳು ಒಗ್ಗೂಡಿದರೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ. ನನಗೆ ಪ್ರಧಾನಿಯಾಗುವ ಆಸೆ ಮತ್ತು ಆಕಾಂಕ್ಷೆ ಇಲ್ಲ ಎಂದು ಬಿಹಾರ ಸಿಎಂ ಮಾಧ್ಯಮಗಳಿಗೆ ತಿಳಿಸಿದರು.
ಇದನ್ನೂ ಓದಿ: ದುರ್ಬಲ ಮನಸ್ಸಿನ ನೆಹರುಗಾಗಿ ಪಟೇಲ್ ತಮ್ಮ ಪ್ರಧಾನಿ ಹುದ್ದೆ ತ್ಯಾಗ ಮಾಡಿದರು: ಕಂಗನಾ