ಹೈದರಾಬಾದ್: ನಗರದ ವಿಜ್ಞಾನಿಗಳು ಹಾಗೂ ಸಂಶೋಧಕರು ತ್ರಿ–ಡಿ ಮುದ್ರಿತ ಕೃತಕ ಕಾರ್ನಿಯಾ ಅಭಿವೃದ್ಧಿಪಡಿಸಿ ಅದನ್ನು ಮೊಲದ ಕಣ್ಣಿಗೆ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಮಟ್ಟಿಗೆ ಇದು ಮೊದಲ ಪ್ರಯೋಗವಾಗಿದೆ. ಎಲ್.ವಿ.ಪ್ರಸಾದ್ ನೇತ್ರ ಸಂಸ್ಥೆ (ಎಲ್‌ವಿಪಿಇಐ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ–ಹೈದರಾಬಾದ್ (ಐಐಟಿಹೆಚ್) ಹಾಗೂ ಸೆಂಟರ್ ಫಾರ್ ಸೆಲ್ಯೂಲರ್ ಅಂಡ್ ಮೊಲಿಕ್ಯುಲರ್ ಬಯಾಲಜಿ (ಸಿಸಿಎಂಬಿ) ಸಂಸ್ಥೆಯ ಸಂಶೋಧಕರು ವ್ಯಕ್ತಿಯೊಬ್ಬರು ದಾನ ಮಾಡಿದ್ದ ಕಾರ್ನಿಯಲ್ ಅಂಗಾಂಶದಿಂದ ಇದನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದು ಸಂಪೂರ್ಣವಾಗಿ ನೈಸರ್ಗಿಕ ಉತ್ಪನ್ನವಾಗಿದೆ. ಇದರಲ್ಲಿ ಯಾವುದೇ ಬಗೆಯ ಸಿಂಥೆಟಿಕ್ ಅಂಶಗಳನ್ನು ಸೇರ್ಪಡೆ ಮಾಡಿಲ್ಲ. ಇದು ಅತ್ಯಂತ ಸುರಕ್ಷಿತವಾಗಿದ್ದು, ರೋಗಿಗಳ ಬಳಕೆಗೆ ಮುಕ್ತವಾಗಿದೆ ಎಂದು ಹೇಳಲಾಗಿದೆ. ಪುನರುತ್ಪಾದಕ ಔಷಧ ಮತ್ತು ಅಂಗಾಂಶ ಇಂಜಿನಿಯರಿಂಗ್‌ನಲ್ಲಿ ಇತ್ತೀಚಿನ ಪ್ರಗತಿಯೊಂದಿಗೆ,ಎಲ್‌ವಿಪಿಇಐ, ಐಐಟಿಹೆಚ್ ಮತ್ತುಸಿಸಿಎಂಬಿಯ ಸಂಶೋಧಕರು ಡಿಸೆಲ್ಯುಲರೈಸ್ಡ್ ಕಾರ್ನಿಯಲ್ ಟಿಶ್ಯೂ ಮ್ಯಾಟ್ರಿಕ್ಸ್ ಮತ್ತು ಮಾನವನ ಕಣ್ಣಿನಿಂದ ಪಡೆದ ಕಾಂಡಕೋಶಗಳನ್ನು ಬಳಸಿ ವಿಶಿಷ್ಟವಾದ ಬಯೋಮಿಮೆಟಿಕ್ ಹೈಡ್ರೋಜೆಲ್ ಅನ್ನು ಅಭಿವೃದ್ಧಿಪಡಿಸಲು ಬಳಸಲಾಗುತ್ತದೆ.
'ಬಯೊ ಇಂಕ್' ಬಳಕೆ: ಈ ಕಾರ್ನಿಯಾ ತಯಾರಿಕೆಗಾಗಿ 'ಬಯೊ ಇಂಕ್' ಬಳಸಲಾಗಿದೆ. ಯುದ್ಧದ ಸಂದರ್ಭಗಳಲ್ಲಿ ಯೋಧರ ಕಣ್ಣುಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅವರ ದೃಷ್ಟಿಗೆ ಹಾನಿಯಾಗದಂತೆ ರಕ್ಷಿಸಲು ಹಾಗೂ ಕಣ್ಣಿಗೆ ಯಾವುದೇ ಬಗೆಯ ಸೋಂಕು ತಗುಲದಂತೆ ತಡೆಯಲು ಬಯೊ ಇಂಕ್ ಪ್ರಯೋಜನಕಾರಿ. ಕುಗ್ರಾಮದ ಜನರು ಕಣ್ಣಿನ ಆರೈಕೆ ಸೌಕರ್ಯದಿಂದ ವಂಚಿತರಾಗಿರುತ್ತಾರೆ. ಅಂತಹ ಸ್ಥಳಗಳಲ್ಲಿ ಬಯೊ ಇಂಕ್ ಬಳಸಬಹುದು ಎಂದು ಕಾರ್ನಿಯಾ ಅಭಿವೃದ್ಧಿಪಡಿಸಿರುವ ಸಂಶೋಧಕರ ತಂಡದ ಸದಸ್ಯರಾದ ಡಾ.ಸಯಾನ್ ಬಸು ಹಾಗೂ ಡಾ.ವಿವೇಕ್ ಸಿಂಗ್ ತಿಳಿಸಿದ್ದಾರೆ.
ಕಾರ್ನಿಯಲ್ ಸ್ಕೇರಿಂಗ್ ಮತ್ತು ಕೆರಾಟೊಕೊನಸ್ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನೂ ಗಮನದಲ್ಲಿಟ್ಟುಕೊಂಡು ತ್ರಿ–ಡಿ ಮುದ್ರಿತ ಕೃತಕ ಕಾರ್ನಿಯಾವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದ್ದೇವೆ ಎಂದು ಹೇಳಿದ್ದಾರೆ. ಸಿಸಿಎಂಬಿ ಹಿರಿಯ ವಿಜ್ಞಾನಿ ಬಿ ಕಿರಣ್ ಕುಮಾರ್ ಮಾತನಾಡಿ, ಜೈವಿಕ-ಮುದ್ರಿತ ಕಾರ್ನಿಯಾವು ಹೇಗೆ ಸಂಯೋಜಿಸುತ್ತದೆ ಮತ್ತು ದೃಷ್ಟಿ ಮರುಸ್ಥಾಪನೆಗೆ ಕೊಡುಗೆ ನೀಡುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ ಎಂದರು.
ಈ ಸಂಶೋಧನೆಯು ಜೈವಿಕ ತಂತ್ರಜ್ಞಾನ ಇಲಾಖೆಯ ಅನುದಾನದಿಂದ ಧನಸಹಾಯವನ್ನು ಪಡೆದಿದೆ ಮತ್ತು ರೋಗಿಗಳಲ್ಲಿ ಕ್ಲಿನಿಕಲ್ ಪ್ರಯೋಗಗಳಿಗೆ ಕಾರಣವಾಗುವ ಕಾರ್ಯಕ್ಕೆ ವಿಜಯವಾಡದ ಶ್ರೀ ಪದ್ಮಾವತಿ ವೆಂಕಟೇಶ್ವರ ಪ್ರತಿಷ್ಠಾನದ ಅನುದಾನದ ಮೂಲಕ ಧನಸಹಾಯ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಜಾಗತಿಕ ವಾಹನ ಮಾರಾಟದಲ್ಲಿ ಹ್ಯುಂಡೈಗೆ 3ನೇ ಸ್ಥಾನ