ಹೈದರಾಬಾದ್ ಜ್ಯುಬಿಲಿ ಹಿಲ್ಸ್ ಗ್ಯಾಂಗ್ರೇಪ್ ಪ್ರಕರಣ: ಫೋಟೊ ಡಿಲೀಟ್ ಮಾಡುವಂತೆ ದೂರು - ಅಪ್ರಾಪ್ತ ಬಾಲಕಿಯ ಅತ್ಯಾಚಾರ
ಹೈದರಾಬಾದ್ನ ಜ್ಯುಬಿಲಿ ಹಿಲ್ಸ್ ಗ್ಯಾಂಗ್ ರೇಪ್ ಕೇಸ್- ಸೋಶಿಯಲ್ ಮೀಡಿಯಾಗಳಲ್ಲಿ ಸಂತ್ರಸ್ತೆಯ ಫೋಟೋ ವೈರಲ್- ಫೋಟೋ ಡಿಲೀಟ್ ಮಾಡುವಂತೆ ಬಾಲಕಿಯ ಪಾಲಕರಿಂದ ಪೊಲೀಸರಿಗೆ ದೂರು

ಹೈದರಾಬಾದ್: ಇಲ್ಲಿನ ಜ್ಯುಬಿಲಿ ಹಿಲ್ಸ್ ಪ್ರದೇಶದಲ್ಲಿ ನಡೆದ ಗ್ಯಾಂಗ್ರೇಪ್ಗೆ ಸಂಬಂಧಿಸಿದ ಸಂತ್ರಸ್ತೆಯ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ ಸಂತ್ರಸ್ತ ಬಾಲಕಿಯ ಪಾಲಕರು ಮಹಿಳಾ ಸುರಕ್ಷತಾ ಇಲಾಖೆಗೆ ದೂರು ನೀಡಿದ್ದಾರೆ.
ಬಾಲಕಿಯ ಜೊತೆಗೆ ಐದು ಜನ ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೋ ಮತ್ತು ಆಕೆಯ ಕುತ್ತಿಗೆಯ ಮೇಲಾಗಿರುವ ಗಾಯ ತೋರಿಸುವ ಫೋಟೋಗಳನ್ನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಎಲ್ಲ ವಿಡಿಯೋ, ಫೋಟೋಗಳನ್ನು ಡಿಲೀಟ್ ಮಾಡಬೇಕೆಂದು ಅವರು ಕೋರಿದ್ದಾರೆ.
ದೂರು ಸ್ವೀಕರಿಸಿದ ಮಹಿಳಾ ಸುರಕ್ಷತಾ ಇಲಾಖೆಯು ಪ್ರಕರಣವನ್ನು ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ವರ್ಗಾಯಿಸಿದೆ. ಸೈಬರ್ ಕ್ರೈಂ ಪೊಲೀಸರು ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತೆಯ ದೃಶ್ಯಗಳನ್ನು ತೆಗೆದುಹಾಕುವಂತೆ ಇನ್ಸ್ಟಾ ಬಳಕೆದಾರರಿಗೆ ನೋಟಿಸ್ ನೀಡಲಾಗಿದೆ.
ಈ ವರ್ಷ ಮೇ 28 ರಂದು ಹೈದರಾಬಾದ್‌ನಲ್ಲಿ ನಡೆದಿದ್ದ ಅತ್ಯಾಚಾರದ ಘಟನೆ ಸಂಚಲನ ಮೂಡಿಸಿತ್ತು. ಬಾಲಕಿಯ ಮೇಲೆ ಸಾದುದ್ದೀನ್ ಎಂಬಾತ ಸೇರಿದಂತೆ ನಾಲ್ವರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಜೂನ್ 2ರಂದು ಅಪ್ರಾಪ್ತ ಬಾಲಕಿ ಹಾಗೂ ಆರೋಪಿಗಳ ವಿಡಿಯೋಗಳು ಇಂಟರ್ನೆಟ್ನಲ್ಲಿ ಕಾಣಿಸಿಕೊಂಡಿದ್ದವು. ಈ ವಿಡಿಯೋಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಓಲ್ಡ್‌ಟೌನ್‌ನ ವ್ಯಕ್ತಿಯೊಬ್ಬರಿಗೆ ಸೈಬರ್‌ಕ್ರೈಮ್ ಪೊಲೀಸರು ಈಗಾಗಲೇ ನೋಟಿಸ್ ನೀಡಿದ್ದಾರೆ. ಅಲ್ಲದೆ ಪೊಲೀಸರು ಫೋಟೋಗಳು ಅಪ್ಲೋಡ್ ಆಗಿರುವ ಇನ್ಸ್ಟಾಗ್ರಾಂ ಪೋಸ್ಟ್ಗೆ ಸಂಬಂಧಿಸಿದಂತೆ ಐಪಿ ಅಡ್ರೆಸ್ ಹುಡುಕುತ್ತಿದ್ದಾರೆ.