ಹೈದರಾಬಾದ್(ತೆಲಂಗಾಣ): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಗಳು ಅಂತಿಮ ಹಂತದಲ್ಲಿವೆ. ಹಲವು ವರ್ಷಗಳ ಕಾಯುವಿಕೆಯ ನಂತರ ತಲೆ ಎತ್ತುತ್ತಿರುವ ಐತಿಹಾಸಿಕ ಮಹತ್ವದ ಮಂದಿರವನ್ನು ಕಣ್ತುಂಬಿಕೊಳ್ಳಲು ಇಡೀ ದೇಶದ ಜನತೆ ಕಾತರದಿಂದ ಕಾಯುತ್ತಿದ್ದಾರೆ. ಭವ್ಯ ಮಂದಿರದ ಬಾಗಿಲುಗಳನ್ನು ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಸಂಸ್ಥೆಯೊಂದು ವಿನ್ಯಾಸ ಮಾಡಿ ಸಿದ್ಧಪಡಿಸುತ್ತಿದೆ.
ಸಿಕಂದರಾಬಾದ್ ಕಂಟೋನ್ಮೆಂಟ್ನ ಅನುರಾಧಾ ಟಿಂಬರ್ ಎಸ್ಟೇಟ್ ಸಂಸ್ಥೆಯು ರಾಮ ಮಂದಿರಕ್ಕಾಗಿ ಬಾಗಿಲುಗಳನ್ನು ತಯಾರಿಸುತ್ತಿದೆ. ತೆಲಂಗಾಣದ ಪ್ರಸಿದ್ಧ ಯಾದಾದ್ರಿ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಮುಖ್ಯ ಬಾಗಿಲುಗಳನ್ನು ಇದೇ ಸಂಸ್ಥೆ ವಿನ್ಯಾಸಗೊಳಿಸಿದೆ. ಅಲ್ಲದೇ, ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಿದ್ದಾಗ ಅನಂತ ಶೇಷಶಯನ ಮಹಾವಿಷ್ಣುಮೂರ್ತಿಯ ದಾರುಶಿಲ್ಪ ನಿರ್ಮಿಸಿ ಗಮನ ಸೆಳೆದಿದೆ.
ಅಯೋಧ್ಯೆ ರಾಮ ಮಂದಿರದ ಮುಖ್ಯ ಬಾಗಿಲು ಮತ್ತು ಇತರ ಬಾಗಿಲುಗಳನ್ನು ವಿನ್ಯಾಸಗೊಳಿಸುವ ಅಪರೂಪದ ಅವಕಾಶ ಅನುರಾಧಾ ಟಿಂಬರ್ ಎಸ್ಟೇಟ್ಗೆ ಲಭಿಸಿದೆ. ಬೇರೆ ಕಂಪನಿಗಳು ಬಾಗಿಲು ತಯಾರಿಸಲು ಮುಂದೆ ಬಂದರೂ ಯಾದಾದ್ರಿ ದೇವಸ್ಥಾನದ ಬಾಗಿಲುಗಳ ತಯಾರಿಕೆ, ಗುಣಮಟ್ಟ ಕಾರ್ಯಗಳಿಂದ ಈ ಸಂಸ್ಥೆ ಸಾಕಷ್ಟು ಹೆಸರು ಮಾಡಿದೆ. ಇದರಿಂದ ಜೂನ್ನಲ್ಲಿ ಅಯೋಧ್ಯಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಆದೇಶದ ಮೇರೆಗೆ ಅನುರಾಧಾ ಟಿಂಬರ್ನವರು ಸಿದ್ಧಪಡಿಸುವ ಕಾರ್ಯಾರಂಭಿಸಿದ್ದಾರೆ. ತಮಿಳುನಾಡಿನ 60 ಶಿಲ್ಪಿಗಳ ತಂಡವು ಮಹಾರಾಷ್ಟ್ರದ ಬಲ್ಹರ್ಷಾದಿಂದ ತಂದ ವಿಶೇಷ ತೇಗದಿಂದ ಅಯೋಧ್ಯೆ ದೇವಾಲಯದ ಸಮೀಪವೇ ಬಾಗಿಲುಗಳನ್ನು ತಯಾರಿಸುತ್ತಿದೆ.
ಬಾಗಿಲುಗಳಿಗೆ ಚಿನ್ನದ ಲೇಪನ: ಟಿಂಬರ್ ಎಸ್ಟೇಟ್ ವ್ಯವಸ್ಥಾಪಕ ಚದಲವಾಡ ಶರತ್ ಬಾಬು ಮಾತನಾಡಿ, ''ಯಾದಾದ್ರಿ ಲಕ್ಷ್ಮೀನರಸಿಂಹ ಸ್ವಾಮಿಯ ಆಶೀರ್ವಾದದಿಂದ ಅಯೋಧ್ಯೆಯ ರಾಮ ಮಂದಿರದ ಬಾಗಿಲುಗಳನ್ನು ಮಾಡುವ ಅಪರೂಪದ ಅವಕಾಶ ಸಿಕ್ಕಿದೆ. ಕಳೆದ ಜೂನ್ ತಿಂಗಳಿನಲ್ಲಿ ಈ ಕೆಲಸ ಆರಂಭಿಸಿದ್ದೇವೆ. 8 ಅಡಿ ಎತ್ತರ, 12 ಅಡಿ ಅಗಲದ ಮುಖ್ಯ ಬಾಗಿಲು ಹಾಗೂ 118 ಇತರ ಬಾಗಿಲುಗಳ ಸಿದ್ಧಪಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ'' ಎಂದು ತಿಳಿಸಿದರು.
''ಮುಖ್ಯದ್ವಾರದ ಜೊತೆಗೆ ಇತರ 18 ಬಾಗಿಲುಗಳಿಗೆ ಚಿನ್ನದ ಲೇಪನ ಮಾಡಲಾಗಿದೆ. ಇವುಗಳಲ್ಲದೇ ಇನ್ನೂ 200ರಿಂದ 300 ಬಾಗಿಲುಗಳ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸುತ್ತಿದ್ದೇವೆ. ಎಲ್ಲ ಬಾಗಿಲುಗಳನ್ನು ಉಕ್ಕು ಮತ್ತು ಕಬ್ಬಿಣ ಬಳಸದೇ ಕೇವಲ ಬಲ್ಹರ್ಷಾ ತೇಗದಿಂದ ಮಾಡಲಾಗುತ್ತಿದೆ. ಇನ್ನೊಂದು ವರ್ಷದೊಳಗೆ ಈ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ. ಈಗಾಗಲೇ ಪೂರ್ಣಗೊಂಡಿರುವ ಬಾಗಿಲುಗಳನ್ನು ಜನವರಿ 1ರಂದು ಅಳವಡಿಸುವ ಸಿದ್ಧತೆ ಮಾಡಲಾಗುತ್ತಿದೆ'' ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: 41 ದಿನಗಳ ಶಬರಿಮಲೆ ಮೊದಲ ಯಾತ್ರೆ ಇಂದು ಕೊನೆ: ಡಿಸೆಂಬರ್ 30ರಂದು ದೇಗುಲ ಮರು ಆರಂಭ