ಕೊಯಮತ್ತೂರು (ತಮಿಳುನಾಡು): ಕೊಯಮತ್ತೂರಿನ ನ್ಯಾಯಾಲಯದಲ್ಲೇ ಪತ್ನಿಯ ಮೇಲೆ ಪತಿ ಆಸಿಡ್ ದಾಳಿ ಮಾಡಿದ ಅಮಾನವೀಯ ಘಟನೆ ಗುರುವಾರ ನಡೆದಿದೆ. ಹೌದು, ಕೊಯಮತ್ತೂರಿನಲ್ಲಿ ಪ್ರಕರಣವೊಂದರ ವಿಚಾರಣೆಗೆಂದು ನ್ಯಾಯಾಲಯಕ್ಕೆ ಬಂದಿದ್ದ ಪತ್ನಿಯ ಮೇಲೆ ಪತಿ ಆಸಿಡ್ ದಾಳಿ ಮಾಡಿರುವ ಪ್ರಕರಣ ಕೋರ್ಟ್ ಆವರಣದಲ್ಲೇ ನಡೆದಿರುವುದು ಅಲ್ಲಿದ್ದ ಜನರನ್ನು ಬೆಚ್ಚಿಬೀಳಿಸಿದೆ..
ಪತ್ನಿ ಮೇಲೆ ಆಸಿಡ್ ದಾಳಿ ಪಾಪಿ ಪತಿ: ಆರೋಪಿ ಪತಿ ಶಿವಕುಮಾರ್ (41) ಪತ್ನಿ ಕವಿತಾ (37) ದಂಪತಿ ನಡುವೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ, ಪತ್ನಿ ಕವಿತಾ ಪತಿ ವಿರುದ್ಧ ದೂರು ದಾಖಲಿಸಿದ್ದರು. ಕೊಯಮತ್ತೂರು ಇಂಟಿಗ್ರೇಟೆಡ್ ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿರುವ 1ನೇ ಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ಹಿನ್ನೆಲೆ, ಇಂದು ಪತಿ ಹಾಗೂ ಪತ್ನಿ ವಿಚಾರಣೆಗೆ ಬಂದಿದ್ದು, ಇಬ್ಬರೂ ಕಾಯುತ್ತಾ ಕುಳಿತಿದ್ದರು. ಆಗ ಶಿವಕುಮಾರ್ ಬಾಟಲಿಯಲ್ಲಿ ತಂದಿದ್ದ ಆಸಿಡ್ ಅನ್ನು ತೆಗೆದುಕೊಂಡು ಕವಿತಾ ಮೇಲೆ ದಾಳಿ ಮಾಡಿದ್ದಾನೆ. ಕೂಡಲೇ ಅಕ್ಕಪಕ್ಕದಲ್ಲಿದ್ದ ವಕೀಲರು ಕವಿತಾಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಇದೇ ವೇಳೆ ಅವರ ಪಕ್ಕದಲ್ಲಿದ್ದ ಇತರ ವಕೀಲರು ಶಿವಕುಮಾರ್ ಮೇಲೆ ಹಲ್ಲೆಗೆ ಯತ್ನಿಸಿದರು.
ಇದನ್ನೂ ಓದಿ: ಪತ್ನಿಯ ಕೊಂದು ಮೂರು ಭಾಗಗಳಾಗಿ ಶವ ತುಂಡರಿಸಿ ಹೂತು ಹಾಕಿದ ಪತಿ!
ಆರೋಪಿ ಶಿವಕುಮಾರ್ ಅರೆಸ್ಟ್: ತಕ್ಷಣ ಪೊಲೀಸ್ ಅಧಿಕಾರಿಗಳು ಶಿವಕುಮಾರ್ ಅವರನ್ನು ಠಾಣೆಗೆ ಕರೆದೊಯ್ಯಲು ಮುಂದಾದಾಗ, ಆರೋಪಿ ಶಿವಕುಮಾರ್ ಸಮ್ಮಖದಲ್ಲಿ ವಕೀಲರು ಹಾಗೂ ಪೊಲೀಸರೊಂದಿಗೆ ವಾಗ್ವಾದ ನಡೆದಿದೆ. ಬಳಿಕ ಪೊಲೀಸರು, ಆರೋಪಿ ಶಿವಕುಮಾರನನ್ನು ಪೊಲೀಸ್ ವಾಹನದಲ್ಲಿ ವಿಚಾರಣೆಗಾಗಿ ಠಾಣೆಗೆ ಕರೆದೊಯ್ದರು. ಇದರಿಂದ ಕೋರ್ಟ್ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಘಟನೆಯಲ್ಲಿ ಭಾಗಿಯಾಗಿದ್ದ ಶಿವಕುಮಾರ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಬಳಿಕ ಆರೋಪಿಯನ್ನೂ ತಪಾಸಣೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇದನ್ನೂ ಓದಿ: ಹರಿಯಾಣದಲ್ಲೇ ತಲೆ ಮರೆಸಿಕೊಂಡು ಕುಳಿತಿದ್ದ ಅಮೃತಪಾಲ್ ಸಿಂಗ್: ಮಹಿಳೆ ಪೊಲೀಸ್ ವಶಕ್ಕೆ
ಪೊಲೀಸರು ಹೇಳಿದ್ದೇನು?: ಮಹಿಳೆಗೆ ಶೇಕಡಾ 80 ರಷ್ಟು ಸುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಸ್ತುತ ವೈದ್ಯರು ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದ್ದು, ತನಿಖೆಯ ನಂತರ ಸಂಪೂರ್ಣ ಮಾಹಿತಿ ತಿಳಿಯಲಿದೆ ಎಂದು ಕೊಯಮತ್ತೂರು ಉಪ ಪೊಲೀಸ್ ಆಯುಕ್ತ ಸಂತೀಸ್ ಹೇಳಿದರು.
ಆ್ಯಸಿಡ್ ಎಸೆಯುವುದು ಅತಿ ದೊಡ್ಡ ಅಪರಾಧ. ವಿಧಿವಿಜ್ಞಾನ ಪರೀಕ್ಷೆ ನಡೆಸಿದ ಬಳಿಕವಷ್ಟೇ ಆಸಿಡ್ನ ಸ್ವರೂಪ ಗೊತ್ತಾಗಲಿದೆ. ನೀರಿನ ಬಾಟಲಿಯಲ್ಲಿ ಆ್ಯಸಿಡ್ ತಂದಿರುವುದರಿಂದ ಸುಲಭವಾಗಿ ಪತ್ತೆ ಹಚ್ಚಲು ಆಗಲಿಲ್ಲ. ತನಿಖೆಯ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ: ಎಕ್ಸ್‌ಪ್ರೆಸ್ ರೈಲಿನಲ್ಲಿ ಸಾಗಿಸುತ್ತಿದ್ದ ಚೀಲಗಳಲ್ಲಿ ಸ್ಫೋಟಕಗಳು ಪತ್ತೆ: ಬೆಚ್ಚಿಬಿದ್ದ ಪ್ರಯಾಣಿಕರು
ಇದನ್ನೂ ಓದಿ: 23 ಪ್ರಕರಣ! ಮೋಸ್ಟ್ ವಾಂಟೆಡ್ ಅಜರುದ್ದೀನ್ ಕೊನೆಗೂ ಬಂಧನ