ಜೈಪುರ (ರಾಜಸ್ಥಾನ): ವ್ಯಕ್ತಿಯೊಬ್ಬರು ತನ್ನ ಪತ್ನಿಗೆ ಜೀವನಾಂಶದ ಮೊತ್ತವನ್ನು ಪಾವತಿಸಲು 55 ಸಾವಿರ ರೂಪಾಯಿ ಮೌಲ್ಯದ ನಾಣ್ಯಗಳೊಂದಿಗೆ ನ್ಯಾಯಾಲಯಕ್ಕೆ ಬಂದು ಅಚ್ಚರಿ ಮೂಡಿಸಿದ್ದಾರೆ. ನಾಣ್ಯಗಳ ರಾಶಿ ನೋಡಿ ಕೋರ್ಟ್ನಲ್ಲಿದ್ದವರು ಅರೆಕ್ಷಣ ಹುಬ್ಬೇರಿಸಿದರೆ, ಚಿಲ್ಲರೆ ಹಣದ ರೂಪದಲ್ಲಿ ಜೀವನಾಂಶ ಪಡೆಯಲೊಪ್ಪದ ಪತ್ನಿ 'ಇದೊಂದು ಕಿರುಕುಳ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಇದು ಭಾರತದ ಕಾನೂನುಬದ್ಧವಾದ ಹಣ. ಹಾಗಾಗಿ ಇದನ್ನು ಒಪ್ಪಿಕೊಳ್ಳಬೇಕೆಂದು ಪತಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಇಂತಹದ್ದೊಂದು ವಿಚಿತ್ರ, ಅಚ್ಚರಿ ಮತ್ತು ಅಪರೂಪದ ಘಟನೆಗೆ ರಾಜಸ್ಥಾನದ ರಾಜಧಾನಿ ಜೈಪುರದ ಕೌಟುಂಬಿಕ ನ್ಯಾಯಾಲಯ ಸಾಕ್ಷಿಯಾಯಿತು. ನಾಣ್ಯಗಳ ರೂಪದಲ್ಲಿ ನೀಡುವ ಜೀವನಾಂಶವನ್ನು ಒಪ್ಪಿಕೊಳ್ಳಬೇಕೆಂಬ ಪತಿಯ ವಾದವನ್ನು ಕೋರ್ಟ್ ಕೂಡ ಒಪ್ಪಿಕೊಂಡಿತು. ಮುಂದಿನ ವಿಚಾರಣೆಯ ವೇಳೆ ನಾಣ್ಯಗಳನ್ನು ತಾವೇ ಎಣಿಕೆ ಮಾಡುವಂತೆ ಪತಿಗೆ ನ್ಯಾಯಾಲಯ ಆದೇಶಿಸಿದೆ. ಇದೇ ವೇಳೆ ತಲಾ 1000 ರೂ.ಗಳ ಪ್ರತ್ಯೇಕ ಚೀಲವನ್ನು ತಯಾರಿಸಿ ಪತ್ನಿಗೆ ನೀಡುವಂತೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಜೂನ್ 26ರಂದು ನಡೆಯಲಿದೆ.
ಪ್ರಕರಣದ ಸಂಪೂರ್ಣ ವಿವರ: ಇದು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ. ದಶರತ್ ಕುಮಾವತ್ ಎಂಬವರು ಸೀಮಾ ಕುಮಾವತರನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ಮೂರ್ನಾಲ್ಕು ವರ್ಷಗಳಲ್ಲೇ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಹೀಗಾಗಿ ದಶರತ್ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಜೈಪುರದ ಕೌಟುಂಬಿಕ ನ್ಯಾಯಾಲಯ-1ರಲ್ಲಿ ನಡೆಯುತ್ತಿದೆ. ಕೌಟುಂಬಿಕ ನ್ಯಾಯಾಲಯವು ಪ್ರತಿ ತಿಂಗಳು ಪತ್ನಿಗೆ 5,000 ರೂ.ಗಳನ್ನು ಜೀವನಾಂಶವಾಗಿ ನೀಡುವಂತೆ ಪತಿಗೆ ಸೂಚಿಸಿತ್ತು. ಕಳೆದ 11 ತಿಂಗಳಿಂದ ದಶರತ್ ಪತ್ನಿ ಸೀಮಾ ಅವರಿಗೆ ಈ ಜೀವನಾಂಶದ ಮೊತ್ತ ನೀಡಿರಲಿಲ್ಲ. ಹೀಗಾಗಿ ಪತಿ ವಿರುದ್ಧ ನ್ಯಾಯಾಲಯ ವಸೂಲಾತಿ ವಾರಂಟ್ ಜಾರಿ ಮಾಡಿತ್ತು. ಅಷ್ಟೇ ಅಲ್ಲದೇ, ಮೊತ್ತ ಪಾವತಿಸದ ಹಿನ್ನೆಲೆಯಲ್ಲಿ ಈ ನೋಟಿಸ್ ಅನ್ನು ಬಂಧನ ವಾರಂಟ್ ಆಗಿ ಪರಿವರ್ತಿಸಿತ್ತು.
ಇದನ್ನೂ ಓದಿ: ತಾಯಿಗೆ ಜೀವನಾಂಶ ಕೊಡಿಸಲು ವಕೀಲನಾದ: ತಂದೆ ವಿರುದ್ಧವೇ ಕೇಸ್ ಗೆದ್ದ!
ಅಂತಿಮವಾಗಿ, ಜೂನ್ 17ರಂದು ದಶರತ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅದೇ ದಿನ ಸಂಬಂಧಿಕರು ಏಳು ಚೀಲಗಳಲ್ಲಿ ಒಂದು ಮತ್ತು ಎರಡು ರೂಪಾಯಿಗಳ ನಾಣ್ಯಗಳೊಂದಿಗೆ ನ್ಯಾಯಾಲಯವನ್ನು ತಲುಪಿದ್ದರು. ಈ ಚೀಲಗಳ ತೂಕ ಸುಮಾರು 280 ಕೆ.ಜಿ. ಆಗಿತ್ತು. ಈ ಮೊತ್ತವನ್ನು ಪಾವತಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಪತಿ ದಶರತ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಈ ಬಗ್ಗೆ ಸೀಮಾ ಕುಮಾವತ್ ಪರ ವಕೀಲ ರಾಮಪ್ರಕಾಶ್ ಕುಮಾವತ್ ಮಾತನಾಡಿ, "ಇದು ಮಾನವೀಯತೆ ಅಲ್ಲ. ಪತಿ 11 ತಿಂಗಳಿಂದ ನಿರ್ವಹಣೆ ಮೊತ್ತ ನೀಡುತ್ತಿಲ್ಲ. ಇದೀಗ ಪತ್ನಿಗೆ ಕಿರುಕುಳ ನೀಡಲು 55 ಸಾವಿರ ರೂಪಾಯಿ ನಾಣ್ಯಗಳನ್ನು ತಂದಿದ್ದಾರೆ. ಅವುಗಳನ್ನು ಎಣಿಸಲು 10 ದಿನಗಳು ಬೇಕಾಗುತ್ತದೆ. ಈ ಕುರಿತು ನ್ಯಾಯಾಲಯದಲ್ಲಿಯೇ ನಾಣ್ಯಗಳನ್ನು ಎಣಿಕೆ ಮಾಡಿ ತಲಾ 1,000 ರೂಪಾಯಿ ಮೌಲ್ಯದ ನಾಣ್ಯಗಳ ಚೀಲಗಳನ್ನು ಮಾಡುವಂತೆ ಪತಿಗೆ ನ್ಯಾಯಾಲಯ ಸೂಚಿಸಿದೆ" ಎಂದು ಹೇಳಿದ್ದಾರೆ.
ಜೈಪುರದ ಕೌಟುಂಬಿಕ ನ್ಯಾಯಾಲಯ-1ಕ್ಕೆ ರಜೆ ಇದ್ದ ಕಾರಣ ಈ ಬಾರಿ ಕೋರ್ಟ್ ಎಡಿಜೆ-8ರಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗಿದೆ.
ಇದನ್ನೂ ಓದಿ: ಕೆಲಸವಿಲ್ಲದಿದ್ದರೆ ಕೆಲಸ ಹುಡುಕಿ ಪತಿಯು ಪತ್ನಿಗೆ ಜೀವನಾಂಶ ನೀಡಲೇಬೇಕು: ಹೈಕೋರ್ಟ್ ಆದೇಶ