ಬಾರ್ಪೇಟಾ (ಅಸ್ಸಾಂ): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಹಾಗು ಮಗಳನ್ನು ವ್ಯಕ್ತಿಯೊಬ್ಬ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಸಂಜೆ ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ಗಾಂಧಿನಗರದಲ್ಲಿ ನಡೆದಿದೆ. ಮೃತರನ್ನು ಬಿನಿತಾ ದಾಸ್ (ಪತ್ನಿ) ಮತ್ತು ಹಿಯಾ ದಾಸ್ (ಮಗಳು) ಎಂದು ಗುರುತಿಸಲಾಗಿದೆ. ಆರೋಪಿ ರಿಷಬ್ ದಾಸ್ ಎಂಬಾತನನ್ನು ಬಾರ್ಪೇಟಾ ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಹಿಯಾ ತನ್ನ ಸ್ನೇಹಿತೆ ಮತ್ತು ಅವಳ ತಾಯಿ ಮನೆಯಲ್ಲಿದ್ದರು. ಇದೇ ವೇಳೆ ಮನೆಗೆ ಬಂದ ರಿಷಬ್ ಏಕಾಏಕಿ ತನ್ನ ಪತ್ನಿಗೆ ಕೊಡಲಿಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಇನ್ನು ಅಲ್ಲೇ ಇದ್ದ ಮಗಳು ತಾಯಿಯ ರಕ್ಷಣೆಗೆ ಮುಂದಾಗಿ ತಬ್ಬಿಕೊಂಡಿದ್ದಾಳೆ. ಈ ವೇಳೆ ತನ್ನ ಮಗಳ ಮೇಲೂ ಹಲ್ಲೆ ನಡೆಸಿ ಇಬ್ಬರನ್ನೂ ಸ್ಥಳದಲ್ಲೇ ಭೀಕರವಾಗಿ ಹತ್ಯೆಗೈದಿದ್ದಾನೆ.
ಇದನ್ನೂ ಓದಿ: ಪ್ರತ್ಯೇಕ ಘಟನೆ: ನಾಲ್ವರು ಮಕ್ಕಳ ಕೊಂದು ಆತ್ಮಹತ್ಯೆಗೆ ಶರಣಾದ ಎರಡು ಕುಟುಂಬ
ಹಿಯಾಳ ಸ್ನೇಹಿತ ಮತ್ತು ಅವನ ತಾಯಿಯ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ. ಅದೃಷ್ಟವಶಾತ್ ಅವರು ಕೊಠಡಿಯೊಂದರಲ್ಲಿ ಬಚ್ಚಿಟ್ಟುಕೊಂಡು ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಹಿಯಾಳ ಸ್ನೇಹಿತೆಯ ತಾಯಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮತ್ತೊಂದೆಡೆ, ಇಬ್ಬರೂ ಕಿರುಚಾಡುವ ಶಬ್ದ ಕೇಳಿ ತಕ್ಷಣ ನೆರೆಹೊರೆ ಮನೆಯವರು ಆರೋಪಿ ರಿಷಬ್ ಮನೆ ಬಳಿ ಬಂದಿದ್ದು, ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹಗಳನ್ನು ಕಂಡು ಗಾಬರಿಯಾಗಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬಾರ್ಪೇಟಾ ಪೊಲೀಸರು ಆರೋಪಿ ರಿಷಬ್ ದಾಸ್‌ನನ್ನು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಕೌಟುಂಬಿಕ ಕಲಹಕ್ಕಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಬಾರ್ಪೇಟಾ ಎಸ್ಪಿ ಅಮಿತಾಭ್ ಸಿನ್ಹಾ ಹೇಳಿದ್ದಾರೆ.
ಆರೋಪಿ ಬಾರ್ಪೇಟಾ ಜಿಲ್ಲೆಯ ಗಾಂಧಿನಗರದಲ್ಲಿ ಸ್ಟೇಷನರಿ ಅಂಗಡಿ ಹೊಂದಿದ್ದು, ಹಲವು ವರ್ಷಗಳಿಂದ ಗಂಡ ಮತ್ತು ಹೆಂಡತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇಬ್ಬರು ಒಂದೇ ಮನೆಯಲ್ಲಿ ವಾಸವಿದ್ದರೂ ಕೂಡ ಪ್ರತ್ಯೇಕವಾಗಿ ಅಡುಗೆ ಮಾಡುಕೊಳ್ಳುತ್ತಿದ್ದರು. ಬಿನಿತಾ ಬಾರ್ಪೇಟಾದ ಗಾಂಧಿನಗರದಲ್ಲಿರುವ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ಘಟನೆಗೂ 8 ವರ್ಷಗಳ ಹಿಂದೆ ರಿಷಭ್ ತನ್ನ ಸಹೋದರಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆಕೆಯ ಕೈ ಬೆರಳುಗಳನ್ನು ಕತ್ತರಿಸಿದ್ದನು ಎಂದು ಅಕ್ಕಪಕ್ಕದ ಮನೆಯವರು ಮಾಧ್ಯಮಗಳಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಗೆಳತಿಯ ಫೋನ್ ಕರೆಗೆ ಓಗೊಟ್ಟು ಮರ್ಮಾಂಗ ಕಳೆದುಕೊಂಡ ಪ್ರೇಮಿ!