ನಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೇಗೆ ಮತ್ತು ಎಲ್ಲಿ ಹೂಡಿಕೆ ಮಾಡಬೇಕೆಂಬುದೇ ಅರ್ಥವಾಗುವುದಿಲ್ಲ. ಪಾಲಕರು ತಮ್ಮ ಮಕ್ಕಳು ಜೀವನದಲ್ಲಿ ಗಟ್ಟಿಯಾಗಿ ನೆಲೆಯೂರುವುದನ್ನು, ಅವರ ಉಜ್ವಲ ಭವಿಷ್ಯವನ್ನು ನೋಡಲು ಶ್ರಮಿಸುತ್ತಾರೆ, ಆದರೆ ಅವರಲ್ಲಿ ಅನೇಕರಿಗೆ ಹಣಕಾಸಿನ ಯೋಜನೆ ಬಗ್ಗೆ ತಿಳಿದಿರುವುದಿಲ್ಲ. ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಯೋಜನೆಯನ್ನು ಈಗಿಂದಲೇ ರೂಪಿಸಬೇಕಾಗಿದೆ.
ಇಂದಿನ ದಿನಗಳಲ್ಲಿ ನಮ್ಮ ಹಣವನ್ನು ಸರಿಯಾದ ಸ್ಥಳಗಳಲ್ಲಿ ಹೂಡಿಕೆ ಮಾಡುವುದು ಯಾವುದೇ ಅನಿರೀಕ್ಷಿತ ಘಟನೆ ಮತ್ತು ಅಭೂತಪೂರ್ವ ಪರಿಸ್ಥಿತಿಯನ್ನು ಎದುರಿಸಲು ಮುಖ್ಯವಾಗಿದೆ. ತಮ್ಮ ಮಕ್ಕಳಿಗೆ ಪರಿಪೂರ್ಣ ಜೀವನವನ್ನು ಖಾತ್ರಿಪಡಿಸುವ ಪ್ರತಿಯೊಬ್ಬ ಪೋಷಕರ ಕಲ್ಪನೆಯು ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ. ಅದು ಉನ್ನತ ಶಿಕ್ಷಣ, ಮದುವೆ ಅಥವಾ ಹೊಸ ಮನೆಯನ್ನು ಖರೀದಿಸುವುದರೊಂದಿಗೆ ಸಂಪರ್ಕ ಹೊಂದಿರುತ್ತದೆ.
ಆದರೆ, ನಾವು ಕನಸು ಕಂಡರೆ ಮಾತ್ರ ಸಾಕಾಗುವುದಿಲ್ಲ, ಅದನ್ನು ಕಾರ್ಯರೂಪಕ್ಕೂ ತರಬೇಕು. ಮಕ್ಕಳ ಆರ್ಥಿಕ ಭದ್ರತೆಯನ್ನು ಒದಗಿಸುವ ನೈತಿಕ ಹೊಣೆಗಾರಿಕೆಯನ್ನು ಪೋಷಕರು ಹೊಂದಿರುತ್ತಾರೆ. ಇದಕ್ಕಾಗಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಆದರೆ, ಕೆಲವು ವ್ಯವಸ್ಥೆಗಳನ್ನು ಕಡ್ಡಾಯವಾಗಿ ಮಾಡಬೇಕಿದೆ. ಅವು ಈ ಕೆಳಕಂಡಂತಿವೆ.
1.ಉಯಿಲು ಅಥವಾ ವಿಲ್ ಸಿದ್ಧವಾಗಿಟ್ಟುಕೊಂಡಿರುವುದು
ಆಸ್ತಿ/ಸ್ವತ್ತಿನ ಮಾಲೀಕನ ಮರಣ ಸಂಭವಿಸಿದಾಗ ಆತನ ಆಸ್ತಿ ಯಾರಿಗೆ ಸೇರಬೇಕು, ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಸುವ ಕಾನೂನು ದಾಖಲೆಯನ್ನು ವಿಲ್ ಅಥವಾ ಉಯಿಲು ಎನ್ನುತ್ತೇವೆ. ಯಾವುದೇ ತೊಡಕುಗಳಿಲ್ಲದೇ ತನ್ನ ವಾರಸುದಾರರಿಗೆ ಕಾನೂನುಬದ್ಧವಾಗಿ ಸಂಪತ್ತನ್ನು ವರ್ಗಾಯಿಸುವುದು ಹೆಚ್ಚು ಮುಖ್ಯವಾಗಿದೆ ಎಂಬುದನ್ನು ಪೋಷಕರು ಮರೆಯಬಾರದು. ಹೆಚ್ಚಿನವರು ವಿಲ್ನಲ್ಲಿ ತಮ್ಮ ಸಂಗಾತಿ ಮತ್ತು ಮಕ್ಕಳ ಹೆಸರನ್ನು ನಮೂದಿಸುತ್ತಾರೆ.
ಕೆಲವರು ತಮ್ಮ ನಿಕಟ ಸಂಬಂಧಿಗಳಿಗೆ ಕೆಲವು ಆಸ್ತಿಗಳನ್ನು ಹಂಚಿಕೆ ಮಾಡುವ ಉಯಿಲು ಮಾಡುತ್ತಾರೆ. ಉಯಿಲು ಬರೆದು ಅದನ್ನು ನೋಂದಾಯಿಸುವ ಮೂಲಕ, ನೀವು ಕುಟುಂಬ ಸದಸ್ಯರ ನಡುವೆ ಭವಿಷ್ಯದಲ್ಲಿ ವಿವಾದಗಳನ್ನು ತಪ್ಪಿಸಬಹುದು. ಒಬ್ಬನು ತನ್ನ ಮಗುವಿಗೆ ನೀಡಬಹುದಾದ ಮೊದಲ ಹಣಕಾಸಿನ ಕೊಡುಗೆಯು ವಿಲ್ ಎಂಬುದನ್ನು ನೆನಪಿಡಿ.
2. ಆರೋಗ್ಯ ವಿಮೆ
ಮಗು ಜನಿಸಿದ ತಕ್ಷಣ ಸಂಪೂರ್ಣ ಕುಟುಂಬದ ಎಲ್ಲ ಸದಸ್ಯರು ಆರೋಗ್ಯ ವಿಮಾ ಪಾಲಿಸಿಯನ್ನು ಮಾಡಿಸಿಕೊಳ್ಳುವುದು ಸೂಕ್ತ. ಇದಕ್ಕೆ ಫ್ಯಾಮಿಲಿ ಫ್ಲೋಟರ್ ಎನ್ನುತ್ತೇವೆ. ವೈದ್ಯಕೀಯ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆರೋಗ್ಯ ವಿಮೆ ಇಲ್ಲದೆ, ತುರ್ತು ಪರಿಸ್ಥಿತಿಯಲ್ಲಿ ವೆಚ್ಚಗಳನ್ನು ಭರಿಸುವುದು ಕಷ್ಟ. ಅನಿರೀಕ್ಷಿತ ಅನಾರೋಗ್ಯದ ಸಂದರ್ಭದಲ್ಲಿ, ಉತ್ತಮ ಚಿಕಿತ್ಸೆ ನೀಡಲು ತೊಂದರೆಗಳು ಉಂಟಾಗುತ್ತವೆ. ನಿಮ್ಮ ಮಕ್ಕಳು ನಿರ್ದಿಷ್ಟ ವಯಸ್ಸನ್ನು ತಲುಪಿದಾಗ ಫ್ಯಾಮಿಲಿ ಫ್ಲೋಟರ್ ನೀತಿಯನ್ನು ಅವರ ಸ್ವಂತಕ್ಕೆ ಬದಲಾಯಿಸಿ. ಚಿಕ್ಕ ವಯಸ್ಸಿನಲ್ಲಿ ಪಾಲಿಸಿಯನ್ನು ತೆಗೆದುಕೊಂಡರೆ, ವೈದ್ಯಕೀಯ ಪರೀಕ್ಷೆಯ ಅಗತ್ಯವಿರುವುದಿಲ್ಲ.
ಇದನ್ನೂ ಓದಿ: ವಯಸ್ಸಾಗುತ್ತಿದ್ದಂತೆ ಹೃದಯ ಬಡಿತ ಹೆಚ್ಚುತ್ತಿದೆಯೇ: ಹುಷಾರು ಇದು ಬುದ್ಧಿಮಾಂದ್ಯತೆಯ ಲಕ್ಷಣ ಇರಬಹುದು
3. ಹಣಕಾಸಿನ ನಿರ್ಧಾರ ಕೈಗೊಳ್ಳುವಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಿ
ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಪೋಷಕರು ತಮ್ಮ ಮಕ್ಕಳೊಂದಿಗೆ ಚರ್ಚಿಸುವುದು ಒಳ್ಳೆಯದು. ಇದು ಹಣಕಾಸಿನ ವಿಷಯಗಳಲ್ಲಿ ತಮ್ಮನ್ನು ತಾವು ಯೋಚಿಸಲು ಮಕ್ಕಳನ್ನು ಪ್ರೇರೇಪಿಸುತ್ತದೆ. ವೈಯಕ್ತಿಕ ಹಣಕಾಸು ಯೋಜನೆಗಳನ್ನು ಹೇಗೆ ರೂಪಿಸಬೇಕು ಎಂಬುದನ್ನು ಅವರು ಅರಿತುಕೊಳ್ಳುತ್ತಾರೆ.
ನಿಮ್ಮ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ತಿಳಿದುಕೊಳ್ಳುವುದು ಅವರಿಗೆ ಹೆಚ್ಚುವರಿ ಪ್ರಯೋಜನವಾಗಿದೆ. ಅವರಿಗೆ ಇವೆಲ್ಲದರ ಅರಿವು ಇರುವುದರಿಂದ ಅನಿರೀಕ್ಷಿತವಾಗಿ ಏನಾದರೂ ಸಂಭವಿಸಿದಾಗ ಭಯಪಡುವ ಅಗತ್ಯವಿಲ್ಲ. ಹಣಕಾಸಿನ ವಿಚಾರದಲ್ಲಿ ಮಕ್ಕಳನ್ನು ಪಾಲುದಾರರನ್ನಾಗಿ ಮಾಡುವುದರಿಂದ, ಅವರು ನೈಜ ಪರಿಸ್ಥಿತಿಯನ್ನು ಸ್ಪಷ್ಟವಾಗಿ ತಿಳಿದುಕೊಳ್ಳುತ್ತಾರೆ.
4. ಮಕ್ಕಳಿಗೆ ಸಾಲಮುಕ್ತ ಜೀವನ ಒದಗಿಸಿ
ಸಾಲವು ಒಂದು ಹೊಣೆಗಾರಿಕೆಯಾಗಿದೆ. ಅದನ್ನು ಮಕ್ಕಳಿಗೆ ವರ್ಗಾಯಿಸಬಾರದು. ಇದು ಅವರ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ. ಹೊಸ ಸಾಲವನ್ನು ತೆಗೆದುಕೊಂಡಾಗ, ಅದನ್ನು ಮರುಪಾವತಿಸಲು ಬ್ಯಾಕಪ್ ಯೋಜನೆ ಇರಬೇಕು. ಇದಕ್ಕೆ ಹಣವನ್ನು ಹಂಚಿಕೆ ಮಾಡುವುದು ಅಥವಾ ಲೋನ್ ಕವರ್ ಟರ್ಮ್ ಪಾಲಿಸಿಯನ್ನು ತೆಗೆದುಕೊಳ್ಳುವ ಅಗತ್ಯವಿದೆ.
ಈ ವಿಮಾ ಪಾಲಿಸಿಗಳು ಯಾರಿಗಾದರೂ ನೀಡಬೇಕಾದ ಎಲ್ಲ ಸಾಲಗಳನ್ನು ಒಳಗೊಂಡಿರುತ್ತವೆ. ಸಾಲ ಪಡೆದಾಗ ಅದನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು. ನಮ್ಮ ಸಾಮರ್ಥ್ಯ ಮೀರಿ ಸಾಲ ಪಡೆಯುವುದು ಸರಿಯಲ್ಲ.
ನಿವೃತ್ತಿಯ ನಂತರ ಮಕ್ಕಳ ಮೇಲೆ ಅವಲಂಬನೆಯ ಕಲ್ಪನೆ ಇರಬಾರದು. ನಿವೃತ್ತಿ ಜೀವನದ ಆರ್ಥಿಕ ಅಗತ್ಯಗಳನ್ನು ಪೂರೈಸಲು ನಿವೃತ್ತಿ ಯೋಜನೆಗಳನ್ನು ಮಾಡಬೇಕು. ಅದಕ್ಕಾಗಿ ಸೂಕ್ತ ಹೂಡಿಕೆ ಮಾಡಬೇಕು. ಮಕ್ಕಳಿಗೆ ಚಿಕ್ಕಂದಿನಿಂದಲೇ ಹೂಡಿಕೆಗೆ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಅವರು ಆರ್ಥಿಕ ಸ್ವಾತಂತ್ರ್ಯವನ್ನು ತ್ವರಿತವಾಗಿ ಸಾಧಿಸಲು ಸಾಧ್ಯವಾಗುತ್ತದೆ.
5. ಆರ್ಥಿಕ ಭದ್ರತೆ
ಜನರು ವಿಮೆ ಮಾಡದಿದ್ದಲ್ಲಿ, ಅವರ ಅವಲಂಬಿತರು ಕಠಿಣ ಸನ್ನಿವೇಶಗಳನ್ನು ಎದುರಿಸುವ ಸಾಧ್ಯತೆಗಳು ಹೆಚ್ಚು. ಇಲ್ಲಿ ಜೀವ ವಿಮಾ ಪಾಲಿಸಿಗಳು ಪ್ರಮುಖವಾಗಿವೆ. ಒಬ್ಬ ವ್ಯಕ್ತಿಯು ತಾನು ಸಂಪಾದಿಸುತ್ತಿದ್ದ ಎಲ್ಲ ದಿನಗಳಲ್ಲಿ ಯಾವುದೇ ತೊಂದರೆಯಿಲ್ಲದೇ ಕುಟುಂಬದ ಅಗತ್ಯಗಳನ್ನು ನೋಡಿಕೊಳ್ಳುತ್ತಾನೆ.
ಆದರೆ, ದುರದೃಷ್ಟವಶಾತ್, ಯಾವುದೇ ಅನಿರೀಕ್ಷಿತ ಘಟನೆಯ ಸಂದರ್ಭದಲ್ಲಿ ಎಲ್ಲವೂ ರಿವರ್ಸ್ ಆಗುತ್ತದೆ. ಅಂತಹ ಸಮಸ್ಯೆಗಳನ್ನು ತಪ್ಪಿಸಲು, ಒಬ್ಬರು ಸಮಂಜಸವಾದ ಮೊತ್ತಕ್ಕೆ ಟರ್ಮ್ ವಿಮೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದು ಮಗುವಿನ ಶಿಕ್ಷಣ ಮತ್ತು ಇತರ ಅಗತ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಖಚಿತಪಡಿಸುತ್ತದೆ. ವಿಮೆ ಮಾತ್ರವಲ್ಲದೇ, ನಿಮ್ಮ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಗಳಲ್ಲಿ ಹಣವನ್ನು ಸಂಗ್ರಹಿಸಿಡುವುದು, ಮಕ್ಕಳ ಹೆಸರಲ್ಲಿ ಹಣ ಕೂಡಿಡುವುದರಿಂದಲೂ ಆರ್ಥಿಕ ಭದ್ರತೆ ಇರುತ್ತದೆ.