ವಿಜಯವಾಡ(ಆಂಧ್ರಪ್ರದೇಶ): 2021ರಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಆಂಧ್ರಪ್ರದೇಶ ವಿಶೇಷ ಜಾರಿ ಬ್ಯೂರೋ(SEB) ಅಧಿಕಾರಿಗಳು ಜನವರಿಯಿಂದ ಇಲ್ಲಿಯವರೆಗೆ ದಾಖಲೆಯ 2,31,174 ಕೆಜಿ ಅಕ್ರಮ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಮಾರುಕಟ್ಟೆ ಒಟ್ಟು ಮೌಲ್ಯ 231.17 ಕೋಟಿ ರೂ. ಎಂದು ತಿಳಿದು ಬಂದಿದೆ.
ಎಸ್ಇಬಿಯ ಕಮಿಷನರ್ ವಿನೀತ್ ಬ್ರಿಜ್ಲಾಲ್ ಮಾಧ್ಯಮಗೋಷ್ಠಿ ನಡೆಸಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಆಂಧ್ರಪ್ರದೇಶದಲ್ಲಿ ನಿತ್ಯ ಸರಾಸರಿ 633 ಕೆಜಿ ಅಕ್ರಮ ಗಾಂಜಾ ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.
'ಆಪರೇಷನ್ ಪರಿವರ್ತನ್' ಎಂಬ ವಿಶೇಷ ಕಾರ್ಯಾಚರಣೆ ಅಡಿ ಈ ವರ್ಷದ ಅಕ್ಟೋಬರ್ನಿಂದ ಡಿಸೆಂಬರ್ 29ರವರೆಗೆ ಒಟ್ಟು 299 ಗ್ರಾಮಗಳ 7,375.10 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಗಾಂಜಾ ಬೆಳೆ ನಾಶಪಡಿಸಲಾಗಿದೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ 9,034.49 ಕೋಟಿ ರೂ. ಆಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಔರಂಗಾಬಾದ್ನಲ್ಲಿ ಭೀಕರ ರಸ್ತೆ ಅಪಘಾತ.. ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ!
ಇಷ್ಟೊಂದು ಪ್ರಮಾಣದಲ್ಲಿ ಗಾಂಜಾ ಬೆಳೆ ನಾಶ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಅಕ್ರಮ ಗಾಂಜಾ ಪೂರೈಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬರಲಿದೆ ಎಂಬ ಮಾಹಿತಿ ಹಂಚಿಕೊಂಡಿರುವ ಅವರು, ಅಕ್ರಮ ಮದ್ಯ, ಮರಳು ಸಾಗಣೆ ಸೇರಿದಂತೆ ವಿವಿಧ ಪ್ರಕರಣಗಳಡಿ ಒಟ್ಟು 1,05,689 ಕೇಸ್ ದಾಖಲು ಮಾಡಿಕೊಳ್ಳಲಾಗಿದ್ದು, 1,46,217 ಜನರ ಬಂಧನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.