ಅಮೆರಿಕದ ರಾಷ್ಟ್ರೀಯ ಆರೋಗ್ಯ ವಿಜ್ಞಾನಗಳ ಸಂಸ್ಥೆಯ ಅಂಗಸಂಸ್ಥೆಯಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂರೊಲಾಜಿಕಲ್ ಡಿಸಾರ್ಡರ್ಸ್ ಅಂಡ್ ಸ್ಟ್ರೋಕ್ (National Institute of Neurological Disorders and Stroke -NINDS) ಸಂಸ್ಥೆಯ ವಿಜ್ಞಾನಿಗಳು ಕೋವಿಡ್ ಸೋಂಕು ತಗುಲಿದ ನಂತರ ಹಠಾತ್ತಾಗಿ ನಿಧನರಾದ 9 ಜನರ ಮೆದುಳಿನ ಪರೀಕ್ಷೆಗಳನ್ನು ನಡೆಸಿದೆ. ಹೀಗೆ ಸತ್ತವರ ಮೆದುಳಿನ ರಕ್ತನಾಳಗಳ ಕೋಶಗಳ ಮೇಲೆ ಕೋವಿಡ್ ಆ್ಯಂಟಿಬಾಡೀಸ್ ದಾಳಿಯಾಗಿರುವುದು ಕಂಡು ಬಂದಿದೆ.
ಕೋವಿಡ್-19 ವೈರಸ್ ರೋಗಿಯ ಮೆದುಳಿನಲ್ಲಿ ಪತ್ತೆಯಾಗಿಲ್ಲ ಎಂಬ ತನ್ನದೇ ಸಂಶೋಧನೆಗೆ ಈಗಲೂ ಬದ್ಧವಾಗಿರುವ ಸಂಸ್ಥೆ, ವೈರಸ್ ನೇರವಾಗಿ ಮೆದುಳಿಗೆ ದಾಳಿ ಮಾಡುತ್ತಿಲ್ಲ ಎಂದು ಪ್ರತಿಪಾದಿಸಿದೆ. ಕೋವಿಡ್-19 ಮೆದುಳಿಗೆ ಹೇಗೆ ಹಾನಿ ಮಾಡುತ್ತದೆ ಎಂಬುದನ್ನು ತಿಳಿದರೆ ಚಿಕಿತ್ಸೆಯನ್ನು ಕಂಡು ಹಿಡಿಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಸಂಶೋಧಕರ ಪ್ರಕಾರ, ಕೋವಿಡ್-19 ತಡೆಗಟ್ಟಲು ತಯಾರಾಗುವ ಪ್ರತಿಕಾಯಗಳು (ಆ್ಯಂಟಿಬಾಡೀಸ್) ತಪ್ಪಾಗಿ ರಕ್ತ ಹಾಗೂ ಮೆದುಳಿನ ನಡುವಿನ ಜಾಗದ ಕೋಶಗಳ ಮೇಲೆ ದಾಳಿ ಮಾಡಬಹುದು. ಒಂದಕ್ಕೊಂದು ಬಿಗಿಯಾಗಿ ಪ್ಯಾಕ್ ಮಾಡಿದಂತೆ ಇರುವ ಎಂಡೋಥಿಲಿಯಲ್ ಕೋಶಗಳು ರಕ್ತ ಮತ್ತು ಮೆದುಳಿನ ನಡುವೆ ಗೋಡೆಯನ್ನು ನಿರ್ಮಾಣ ಮಾಡಿರುತ್ತವೆ. ಈ ಗೋಡೆಯು ಅಪಾಯಕರ ವಸ್ತುಗಳು ಮೆದುಳಿಗೆ ಸೇರದಂತೆ ಹಾಗೂ ಅಗತ್ಯ ವಸ್ತುಗಳು ಮಾತ್ರ ಮೆದುಳಿಗೆ ಹೋಗುವಂತೆ ಕೆಲಸ ಮಾಡುತ್ತವೆ. ಮೆದುಳಿನ ರಕ್ತನಾಳದಲ್ಲಿರುವ ಎಂಡೋಥಿಲಿಯಲ್ ಕೋಶಗಳಿಗೆ ಹಾನಿಯಾದಾಗ ರಕ್ತದಲ್ಲಿನ ಪ್ರೋಟೀನ್ಗಳು ಹೊರಗೆ ಸೋರಲಾರಂಭಿಸುತ್ತವೆ. ಇದರಿಂದ ಕೋವಿಡ್-19 ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಆಗಿ ಪಾರ್ಶ್ವವಾಯು ಆಗುವ ಸಾಧ್ಯತೆಗಳು ಹೆಚ್ಚಾಗುತ್ತವೆ.
"ಎಂಡೋಥೀಲಿಯಲ್ ಕೋಶಗಳು ಕ್ರಿಯಾಶೀಲವಾಗುವುದರಿಂದ ಪ್ಲೇಟ್ಲೆಟ್ಗಳು ಆ ರಕ್ತನಾಳಗಳ ಗೋಡೆಗೆ ಅಂಟಿಕೊಳ್ಳುತ್ತವೆ. ಇದರಿಂದ ಹೆಪ್ಪುಗಟ್ಟುವಿಕೆ ಮತ್ತು ಸೋರುವಿಕೆಗಳು ಉಂಟಾಗುತ್ತವೆ. ಇದೇ ಸಮಯದಲ್ಲಿ ಎಂಡೋಥೀಲಿಯಲ್ ಕೋಶಗಳ ಮಧ್ಯದಲ್ಲಿನ ಬಿಗಿಯಾದ ಜಂಕ್ಷನ್ಗಳು ಹಾನಿಗೊಳಗಾಗುತ್ತವೆ. ಇದು ಸೋರುವಿಕೆಗೆ ಕಾರಣವಾಗುತ್ತದೆ" ಎಂದು ಎನ್ಐಎನ್ಡಿಎಸ್ ಕ್ಲಿನಿಕಲ್ ಡೈರೆಕ್ಟರ್ ಅವೀಂದ್ರ ನಾಥ್ ಹೇಳಿದ್ದಾರೆ.
"ಒಂದು ಬಾರಿ ಸೋರುವಿಕೆ ಉಂಟಾದರೆ ಮ್ಯಾಕ್ರೊಫೇಗಸ್ನಂಥ ಇಮ್ಯೂನ್ ಕೋಶಗಳು ಹಾನಿಯನ್ನು ಸರಿಪಡಿಸಲು ಮುಂದಾಗುತ್ತವೆ. ಇದರಿಂದ ಉರಿಯೂತ ಉಂಟಾಗುತ್ತದೆ ಹಾಗೂ ಅದರಿಂದ ನ್ಯೂರಾನ್ಗಳಿಗೆ ಹಾನಿಯಾಗುತ್ತದೆ" ಎನ್ನುತ್ತಾರೆ ಅವೀಂದ್ರ ನಾಥ್.
ಇದನ್ನು ಓದಿ:Oral sex.. ಗಂಟಲು ಕಾನ್ಸರ್ಗೆ ಈ ರೀತಿಯ ಸಂಭೋಗ ಕೂಡ ಕಾರಣ..