ಪ್ರಪಂಚದಾದ್ಯಂತ ಸಾಮಾನ್ಯವಾಗಿ ಓಟ್ಸ್ ಎಂದು ಕರೆಯಲ್ಪಡುವ 'ಅವೇನಾ ಸಟಿವಾ' ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಪೋಷಕಾಂಶಗಳಿಂದ ತುಂಬಿದೆ.
ಪ್ರತಿದಿನ 30-40 ಗ್ರಾಂ ಓಟ್ಸ್ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನವಾಗುತ್ತದೆ. ಬೆಳಗಿನ ಉಪಾಹಾರದಲ್ಲಿ ಸೇವಿಸುವ ಓಟ್ಸ್ ನಿಮಗೆ ದಿನವಿಡೀ ಚೈತನ್ಯ ನೀಡುತ್ತದೆ. ಇದರಲ್ಲಿ ಕಂಡು ಬರುವ ವಿಶೇಷ ರೀತಿಯ ಫೈಬರ್, 'ಬೀಟಾ ಗ್ಲುಕಾನ್' ಆರೋಗ್ಯಕ್ಕೆ ಒಳ್ಳೆಯದು.
ಓಟ್ಸ್ ಫೈಬರ್, ಬೀಟಾ-ಗ್ಲುಕನ್ ಅನ್ನು ಹೊಂದಿರುತ್ತದೆ. ಇದು ಹಾನಿಕಾರಕ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ದೆಹಲಿಯ ಪೌಷ್ಟಿಕ ತಜ್ಞೆ ದಿವ್ಯಾ ಶರ್ಮಾ ವಿವರಿಸುತ್ತಾರೆ.
ಫೈಬರ್ ಹೊರತಾಗಿ, ಪ್ರೋಟೀನ್ ಕೂಡ ಓಟ್ಸ್ನಲ್ಲಿ ಹೇರಳವಾಗಿ ಕಂಡು ಬರುತ್ತದೆ. ಓಟ್ಸ್ ಸೇವನೆಯು ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ಅವರು ಹೇಳುತ್ತಾರೆ. ಯಾಕೆಂದರೆ, ಫೈಬರ್ ಸಮೃದ್ಧವಾಗಿರುವುದರಿಂದ ಜೀರ್ಣಿಸಿಕೊಳ್ಳಲು ತುಸು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಇದು ಹೊಟ್ಟೆ ತುಂಬಿದಂತೆ ಮಾಡುತ್ತದೆ. ಓಟ್ಸ್ ಸಹಾಯದಿಂದ, ಅನಗತ್ಯ ಆಹಾರ ಸೇವನೆಯನ್ನು ತಪ್ಪಿಸಬಹುದು. ಇದು ಜಿಡ್ಡು ರಹಿತವಾಗಿರುವುದರಿಂದ ಜಿಡ್ಡು ಅಲರ್ಜಿ ಇರುವ ಜನರೂ ಇದನ್ನು ಸೇವಿಸಬಹುದು.
ಓಟ್ಸ್‌ನ ಪೌಷ್ಟಿಕಾಂಶದ ಪ್ರಮಾಣ : ಹೆಚ್ಚಿನ ಜನರು ಬೆಳಗಿನ ಉಪಾಹಾರಕ್ಕಾಗಿ ಓಟ್ಸ್ ತಿನ್ನಲು ಬಯಸುತ್ತಾರೆ. ಯಾಕೆಂದರೆ, ಇದನ್ನು ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ (USDA) ಪ್ರಕಾರ, 100 ಗ್ರಾಂ ಓಟ್ಸ್ ಪೌಷ್ಟಿಕಾಂಶದ ಪ್ರಮಾಣ ಇಂತಿದೆ.
ಪೋಷಕಾಂಶಗಳು | ಪ್ರಮಾಣ |
ಪ್ರೋಟೀನ್ | 12.5g |
ಒಟ್ಟು ಲಿಪಿಡ್ (fat) | 6.25g |
ಕಾರ್ಬೋಹೈಡ್ರೇಟ್ಸ್ | 67.5g |
ಫೈಬರ್ | 10g |
ಕೊಬ್ಬಿನ ಆಮ್ಲ (monounsaturated fat) | 2.5g |
ಕೊಬ್ಬಿನ ಆಮ್ಲ (polyunsaturated fat) | 2.5g |
ಕ್ಯಾಲ್ಸಿಯಂ | 50g |
ಕಬ್ಬಿಣಾಂಶ | 4.25g |
ಪೊಟ್ಯಾಶಿಯಂ | 350g |
ಓಟ್ಸ್‌ನ ಪ್ರಯೋಜನಗಳು:
ಅಧಿಕ ರಕ್ತದೊತ್ತಡ, ಮಧುಮೇಹ, ಮಲಬದ್ಧತೆ ಇರುವವರಿಗೆ ಮತ್ತು ಎಲ್ಲಾ ವಯಸ್ಸಿನ ಜನರಿಗೆ ಓಟ್ಸ್ ಸೇವನೆಯು ಪ್ರಯೋಜನಕಾರಿ ಎಂದು ಪೌಷ್ಟಿಕಾಂಶ ತಜ್ಞೆ ದಿವ್ಯಾ ಶರ್ಮಾ ಮಾಹಿತಿ ನೀಡಿದ್ದಾರೆ. ಓಟ್ಸ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಆಗುವ ಕೆಲವು ಆರೋಗ್ಯಕರ ಪ್ರಯೋಜನಗಳು ಈ ಕೆಳಗಿನಂತಿವೆ.
- ಓಟ್ಸ್ನಲ್ಲಿ ಕಂಡು ಬರುವ ಫೈಬರ್ 'ಬೀಟಾ ಗ್ಲುಕನ್' ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಇದನ್ನು ನಿಯಮಿತವಾಗಿ ಸೇವಿಸುವವರು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವುದು ಕಡಿಮೆ.
- ಓಟ್ಸ್‌ನ ನಿಯಮಿತ ಸೇವನೆಯು ಅಧಿಕ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಓಟ್ಸ್ ಸೇವನೆಯು ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ.
- ಬೆಳಗಿನ ಉಪಾಹಾರಕ್ಕಾಗಿ ಓಟ್ಸ್ ತಿನ್ನುವುದರಿಂದ ನಿಮ್ಮ ಹೊಟ್ಟೆ ತುಂಬ ಹೊತ್ತು ತುಂಬಿರುತ್ತದೆ ಮತ್ತು ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.
- ಓಟ್ಸ್ನಲ್ಲಿರುವ ಕರಗದ ನಾರು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.
- ಓಟ್ಸ್ನಲ್ಲಿ ಕ್ಯಾಲ್ಸಿಯಂ, ಪೋಟ್ಯಾಶಿಯಂ, ವಿಟಮಿನ್ ಬಿ-ಕಾಂಪ್ಲೆಕ್ಸ್ ಮತ್ತು ಮೆಗ್ನೀಶಿಯಂ ಹೇರಳವಾಗಿದೆ. ಇವು ನರಮಂಡಲದ(nervous system) ಆರೋಗ್ಯಕ್ಕೆ ಒಳ್ಳೆಯದು. ಇದರ ಹೊರತಾಗಿ, ಓಟ್ಸ್ನಲ್ಲಿರುವ ಅಂಶಗಳು ಮೆದುಳಿನಲ್ಲಿ ಸಿರೊಟೋನಿನ್ ಪ್ರಮಾಣವನ್ನು ಹೆಚ್ಚಿಸುತ್ತವೆ. ಇದು ಒತ್ತಡ ಮತ್ತು ಖಿನ್ನತೆಯಂತಹ ಮಾನಸಿಕ ಸ್ಥಿತಿಗಳಿಂದ ಪರಿಹಾರವನ್ನು ನೀಡುತ್ತದೆ. ಇದು ಉತ್ತಮ ನಿದ್ರೆಗೆ ಸಹಕಾರಿ.
- ಓಟ್ಸ್ ಸೇವನೆಯು ಶುಷ್ಕ ಚರ್ಮದಿಂದ ಬಳಲುತ್ತಿರುವ ಜನರಿಗೆ ಒಳ್ಳೆಯದು. ಓಟ್ಸ್ ತಿನ್ನುವುದಕ್ಕಷ್ಟೇ ಅಲ್ಲ, ಓಟ್ಸ್ ಫೇಸ್ ಪ್ಯಾಕ್ ಚರ್ಮಕ್ಕೂ ಒಳ್ಳೆಯದು ಮತ್ತು ಇದು ಸೌಂದರ್ಯವನ್ನು ಹೆಚ್ಚಿಸುತ್ತದೆ.