ನಳಂದಾ (ಬಿಹಾರ): ಬಿಹಾರದಲ್ಲಿ ರಾಮ ನವಮಿ ದಿನದಂದು ನಡೆದ ಘರ್ಷಣೆಯಿಂದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಸಾರಾಮ್ ಪಟ್ಟಣದ ಭೇಟಿ ರದ್ದಾಗಿದೆ. ಎರಡು ದಿನಗಳ ಬಿಹಾರ ಪ್ರವಾಸಕ್ಕಾಗಿ ಅಮಿತ್ ಶಾ ಇಂದು ಸಂಜೆ ಪಾಟ್ನಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಆದರೆ, ಗಲಾಟೆ ಹಿನ್ನೆಲೆಯಲ್ಲಿ ನಾಳೆಯ ಸಸಾರಾಮ್ ಪಟ್ಟಣದ ಭೇಟಿ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: ಅಜಂ ಖಾನ್ ಮನೆಯೊಳಗೆ ಮಾಟ ಮಂತ್ರದ ವಸ್ತು ಎಸೆದ ವ್ಯಕ್ತಿ ಅರೆಸ್ಟ್: ನಾಲ್ವರು ಪೊಲೀಸರು ಸಸ್ಪೆಂಡ್
ರಾಜಧಾನಿ ಪಾಟ್ನಾದ ಜಯಪ್ರಕಾಶ್ ನಾರಾಯಣ್ ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಬಂದಿಳಿದಿದ್ದಾರೆ. ಬಿಹಾರದ ಹಿರಿಯ ಬಿಜೆಪಿ ನಾಯಕರು ಹಾಗೂ ಕೇಂದ್ರ ಸಚಿವರು, ಶಾ ಅವರನ್ನು ಬರಮಾಡಿಕೊಂಡರು. ಇಂದು ರಾತ್ರಿ ಪಾಟ್ನಾದಲ್ಲೇ ಅವರು ವಿಶ್ರಾಂತಿ ಪಡೆಯಲಿದ್ದಾರೆ. ಭಾನುವಾರ ಬೆಳಗ್ಗೆ ನಾವಡಕ್ಕೆ ತೆರಳಿರುವ ಅಮಿತ್ ಶಾ, ಅಶೋಕ ಚಕ್ರವರ್ತಿಯ ಜನ್ಮದಿನದ ಅಂಗವಾಗಿ ನಡೆಯುವ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ಸಸಾರಾಮ್ ಪಟ್ಟಣಕ್ಕೂ ಅಮಿತ್ ಶಾ ಭೇಟಿ ನೀಡಿ, ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಬೇಕಿತ್ತು.
ಆದರೆ, ಹಿಂಸಾಚಾರ ಹಿನ್ನೆಲೆ ನಳಂದಾ ಮತ್ತು ಸಸಾರಾಮ್‌ನಲ್ಲಿ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಈ ಬಗ್ಗೆ ಬಿಹಾರ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧರಿ ಮಾತನಾಡಿ, ಬಿಹಾರ ಸರ್ಕಾರ ಸೆಕ್ಷನ್ 144 ವಿಧಿಸಿರುವುದರಿಂದ ನಾವು ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಆಡಳಿತಾರೂಢ ಜೆಡಿಯು ಪಕ್ಷವು ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡ ನಂತರ ರಾಜ್ಯಕ್ಕೆ ನಾಲ್ಕನೇ ಬಾರಿ ಶಾ ಭೇಟಿ ನೀಡಿದ್ದಾರೆ.
ಕಾನೂನು ಸುವ್ಯವಸ್ಥೆ ಸರಿ ಇದೆ - ಸಿಎಂ: ರಾಜ್ಯದ ಸದ್ಯದ ಪರಿಸ್ಥಿತಿ ಬಗ್ಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ವಹಿಸಿದೆ. ಕೇಂದ್ರದ ಸಚಿವರು ಬಂದಾಗ ರಾಜ್ಯ ಸರ್ಕಾರ ತನ್ನೆಲ್ಲ ಜವಾಬ್ದಾರಿ ನಿಭಾಯಿಸುತ್ತದೆ. ಎಲ್ಲಾದರೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ?. ಯಾರದ್ದೋ ಕಿಡಿಗೇಡಿತನದಿಂದ ಇಂತಹ ಸಮಸ್ಯೆ ಉಂಟಾಗಿದೆ. ಕಾನೂನು ಸುವ್ಯವಸ್ಥೆಯ ಸಮಸ್ಯೆ ಇಲ್ಲ ಎಂದು ತಿಳಿಸಿದರು. ಮತ್ತೊಂದೆಡೆ, ಎಐಎಂಐಎಂ ರಾಜ್ಯಾಧ್ಯಕ್ಷ ಅಖ್ತರುಲ್ ಇಮಾನ್ ಮಾತನಾಡಿ, ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿವೆ. ಈ ಶಕ್ತಿಗಳನ್ನು ತಡೆಯುವಲ್ಲಿ ಬಿಹಾರ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.
ರಾಮನವಮಿ ದಿನದಂದು ಸಸಾರಾಮ್ ಮತ್ತು ನಳಂದಾ ಪಟ್ಟಣಗಳಲ್ಲಿ ಘರ್ಷಣೆ ಭುಗಿಲೆದ್ದಿದೆ. ಗುರುವಾರ ಶುರುವಾಗಿದ್ದ ಗಲಾಟೆ ಶುಕ್ರವಾರದವರೆಗೂ ಮುಂದುವರೆದಿತ್ತು. ಇದೇ ಸಂದರ್ಭದಲ್ಲಿ ಕೆಲವರ ಮನೆಗಳನ್ನು ದುಷ್ಕರ್ಮಿಗಳು ಲೂಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇದುವರೆಗೆ 45 ಜನರನ್ನು ಬಂಧಿಸಲಾಗಿದೆ. ಅಲ್ಲದೇ, ನಳಂದಾ ಮತ್ತು ರೋಹ್ತಾಸ್‌ನಲ್ಲಿ ತಲಾ ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಈ ಬಗ್ಗೆ ನಳಂದಾ ಎಸ್‌ಪಿ ಅಶೋಕ್ ಕುಮಾರ್ ಮಿಶ್ರಾ, ಸದ್ಯ 48 ಗಂಟೆಗಳ ಕಾಲ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. 144 ಸೆಕ್ಷನ್ ಅನ್ವಯ ಎಲ್ಲ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: 10 ತಿಂಗಳ ನಂತರ ಜೈಲಿನಿಂದ ಹೊರ ಬಂದ ನವಜೋತ್ ಸಿಂಗ್ ಸಿಧು: ಭದ್ರತೆ ಕಡಿತ