ಕೋಲ್ಕತ್ತಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಗೌಪ್ಯ ಸಭೆ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 100 ದಿನಗಳ ಉದ್ಯೋಗ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರದ ಅನುದಾನ ವಿಳಂಬದ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ಶಾ ಅವರಿಗೆ ಮಮತಾ ಉಡುಗೊರೆ ನೀಡಿದ್ದಾರೆ.
ಪಶ್ಚಿಮ ಬಂಗಾಳ ಸೆಕ್ರೆಟರಿಯೇಟ್ ಕಟ್ಟಡದ 14 ನೇ ಮಹಡಿಯಲ್ಲಿರುವ ಮಮತಾ ಕಚೇರಿಯಲ್ಲಿ ಸುಮಾರು 15 ರಿಂದ 20 ನಿಮಿಷಗಳ ಕಾಲ ಈ ಕುರಿತು ಮಾತುಕತೆ ನಡೆದಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಹಣ ಬಿಡುಗಡೆ ವಿಳಂಬವಾಗಲು ರಾಜ್ಯದ ಕೆಲವು ನಿಯಮಗಳು ಮತ್ತು ನಿರ್ಬಂಧಗಳು ಕಾರಣ ಎಂದು ಗೃಹ ಸಚಿವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಮುಖ್ಯ ಕಾರ್ಯದರ್ಶಿ, ಸಂಬಂಧಿಸಿದ ತೊಡಕುಗಳು ಮತ್ತು ನಿರ್ಬಂಧಗಳನ್ನು ನಿವಾರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಅಮಿತ್ ಶಾ ಅವರು ಪೂರ್ವ ರಾಜ್ಯಗಳ ಝೋನಲ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ಸೂಕ್ತ ಭದ್ರತೆಯನ್ನು ಖಾತ್ರಿಪಡಿಸಲು ರಾಜ್ಯ ಸರ್ಕಾರಗಳ ಸಹಕಾರವನ್ನು ಅವರು ಕೋರಿದ್ದಾರೆ. ಗಡಿಯಲ್ಲಿ ಭದ್ರತೆಯನ್ನು ಖಾತ್ರಿಪಡಿಸುವುದು ಕೇಂದ್ರದ ಜವಾಬ್ದಾರಿ ಮಾತ್ರವಲ್ಲ. ರಾಷ್ಟ್ರದ ಸುರಕ್ಷತೆಯ ದೃಷ್ಟಿಯಲ್ಲಿ ಎಲ್ಲಾ ರಾಜ್ಯ ಸರ್ಕಾರಗಳೂ ಕೂಡ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಅಕ್ರಮ ಒಳನುಸುಳುವಿಕೆ, ಕಳ್ಳಸಾಗಣೆ ತಡೆ, ಸಾರಿಗೆ ಸೌಲಭ್ಯ, ನೀರು ಹಂಚಿಕೆ ಮತ್ತು ಭಾರತ-ಬಾಂಗ್ಲಾದೇಶ ಗಡಿಗೆ ಸಂಬಂಧಿಸಿದ ಇತರೆ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕಕ್ಕೆ ಆಗಮಿಸಲಿದೆ ಬಿಜೆಪಿ ಅಗ್ರ ರಾಷ್ಟ್ರೀಯ ನಾಯಕರ ದಂಡು