ನಾಗ್ಪುರ (ಮಹಾರಾಷ್ಟ್ರ): ಭಾರತೀಯ ಸಂವಿಧಾನದಲ್ಲಿ ಹಿಂದುತ್ವದ ಪ್ರತಿಬಿಂಬವಿದೆ. ದೇಶದ 5,000 ವರ್ಷಗಳ ಹಿಂದಿನ ಸಂಪ್ರದಾಯ ಮತ್ತು ಸಂಸ್ಕೃತಿಯಿಂದಲೇ ಸಂವಿಧಾನ ರಚಿಸಲಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ 'ಹಿಂದುತ್ವ ಮತ್ತು ರಾಷ್ಟ್ರೀಯ ಏಕೀಕರಣ' ಕುರಿತು ಮಾತನಾಡಿದ ಭಾಗವತ್, ಹಿಂದುತ್ವವು ಸಂವಿಧಾನದ ಪೀಠಿಕೆಯ ಪ್ರತಿಬಿಂಬವಾಗಿದೆ. ಸಮಾನತೆ, ಭ್ರಾತೃತ್ವ, ನ್ಯಾಯ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಮತ್ತು ಏಕತೆಯ ಎಳೆಯಂತಹ ವೈವಿಧ್ಯತೆಗಳ ಮೂಲಕ ಸಾಗುತ್ತಿದೆ ಎಂದು ಭಾಗವತ್ ವಿವರಿಸಿದರು.
ದೇಶದ ಸಮಸ್ತ ಜನತೆ ಭಾರತ ಮಾತೆಯ ಸಂತತಿಯಾಗಿದ್ದು, ವಂದೇ ಮಾತರಂ ಜನರನ್ನು ಒಂದುಗೂಡಿಸುತ್ತದೆ. ನಾವೆಲ್ಲರೂ ಒಗ್ಗಟ್ಟಿನಿಂದ ನಡೆಯಬೇಕು ಮತ್ತು ಹಿಂದುತ್ವವೇ ನಮ್ಮೆಲ್ಲರನ್ನೂ ಒಟ್ಟಿಗೆ ಜೋಡಿಸುತ್ತದೆ. ನಾವು ತಪ್ಪುಗಳನ್ನು ಮಾಡುವುದನ್ನು ಬಿಡಬೇಕು ಮತ್ತು ವಿವಿಧತೆಯಲ್ಲಿ ಏಕತೆಯನ್ನು ಉಳಿಸಿಕೊಳ್ಳಬೇಕು. ಎಲ್ಲವನ್ನೂ ಒಳಗೊಂಡಿರುವ ಸತ್ಯವನ್ನು ನಾವು ಹಿಂದುತ್ವ ಎಂದು ಕರೆಯುತ್ತೇವೆ. ಅದು ನಮ್ಮದು, ರಾಷ್ಟ್ರೀಯ ಗುರುತು. ನಾವು ಈಗ ಜಾತ್ಯಾತೀತತೆಯ ಬಗ್ಗೆ ಮಾತನಾಡುತ್ತೇವೆ. ಆದರೆ, ಅದು ನಮ್ಮ ದೇಶದಲ್ಲಿ ವರ್ಷಗಳ ಕಾಲ ಮತ್ತು ಸಂವಿಧಾನವನ್ನು ರಚಿಸುವ ಮೊದಲೇ ಅಸ್ತಿತ್ವದಲ್ಲಿತ್ತು ಎಂದು ಹೇಳಿದರು.
ವಿವಿಧತೆಯಲ್ಲಿ ಏಕತೆಯ ಕಲ್ಪನೆಯು ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯ ಮಾರ್ಗವಾಗಿದೆ ಮತ್ತು ಭಾರತೀಯ ಸಾಂಸ್ಕೃತಿಕ ಗುರುತನ್ನು ಹಿಂದುತ್ವದಿಂದ ವ್ಯಾಖ್ಯಾನಿಸಲಾಗಿದೆ ಎಂದು ತಿಳಿಸಿದರು.
ಹಿಂದೂ ಎಂಬುದು ಸಂಸ್ಕೃತಿಯ ಹೆಸರಾಗಿದೆ. ಅದು ಹೆಚ್ಚಾಗಿ ದೇಶದ ಜನರ ಜೀವನಶೈಲಿಯಾಗಿದೆ. ಯಾರೂ ಧರ್ಮದಿಂದ ಮುಕ್ತರಲ್ಲ, ಕಾಲ ಬದಲಾದಂತೆ ಮತ್ತು ಬೇಡಿಕೆಯಂತೆ ನಾವು ನಮ್ಮನ್ನು ಬದಲಾಯಿಸಿಕೊಳ್ಳಬೇಕು ಎಂದು ವಿವರಿಸಿದರು.