ಮುಂಬೈ : ಜನಸಂಖ್ಯಾ ನಿಯಂತ್ರಣಕ್ಕಾಗಿ ಉತ್ತರಪ್ರದೇಶದಲ್ಲಿ ಯೋಗಿ ಸರ್ಕಾರ ತೆಗೆದುಕೊಳ್ಳಲಿರುವ ಕ್ರಮಗಳನ್ನು ಶಿವಸೇನಾ ಮುಖಂಡ ಸಂಜಯ್ ರಾವತ್ ಸ್ವಾಗತಿಸಿದ್ದಾರೆ. ಆದರೆ, ಚುನಾವಣಾ ಹಿನ್ನೆಲೆಯಲ್ಲಿ ಮಸೂದೆ ಪರಿಚಯಿಸಬಾರದೆಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಸಲಹೆ ನೀಡಿದ್ದಾರೆ.
ಮಸೂದೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರೋಧಿಸುತ್ತಿದ್ದಾರೆ. ಬಿಜೆಪಿ ನಿತೀಶ್ ಸರ್ಕಾರಕ್ಕೆ ಬಿಹಾರದಲ್ಲಿ ಬೆಂಬಲ ನೀಡುವುದನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಸಂಜಯ್ ರಾವತ್ ಒತ್ತಾಯಿಸಿದ್ದಾರೆ.
ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಜನಸಂಖ್ಯೆ ಸುಮಾರು 15 ಕೋಟಿಯತ್ತ ತಲುಪುತ್ತಿದೆ. ಜೀವನೋಪಾಯಕ್ಕಾಗಿ ಬೇರೆ ರಾಜ್ಯಗಳ ಜನರೂ ಇಲ್ಲಿಗೆ ಆಗಮಿಸುತ್ತಿದ್ದಾರೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕೆಂದು ರಾವತ್ ಆಗ್ರಹಿಸಿದ್ದಾರೆ.
ಭಾರತದಲ್ಲಿ 1947ರಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆಯ ಬಗ್ಗೆ ಉಲ್ಲೇಖ ಮಾಡಿರುವ ಸಂಜಯ್ ರಾವತ್, ಹಿಂದೂಗಳನ್ನು ಜಾತ್ಯತೀತರಾಗಿರುವಂತೆ ಒತ್ತಾಯ ಮಾಡಲಾಗುತ್ತಿದೆ. ಆದರೆ, ಉಳಿದ ಧರ್ಮದ ಜನರು ಧಾರ್ಮಿಕ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸಮುದಾಯಗಳ ಜನರು ಜನಸಂಖ್ಯೆ ನಿಯಂತ್ರಣ ಮತ್ತು ಕುಟುಂಬ ಯೋಜನೆಯನ್ನು ನಂಬುವುದಿಲ್ಲ. ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಿ, ಹೆಚ್ಚು ಮಕ್ಕಳನ್ನು ಪಡೆಯುತ್ತಾರೆ. ಇದರಿಂದ ದೇಶದ ಜನಸಂಖ್ಯೆಯು ಹೆಚ್ಚಾಗಿದೆ. ಅನಕ್ಷರತೆ ಮತ್ತು ನಿರುದ್ಯೋಗದ ಪ್ರಮಾಣವೂ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೃತಕ ಸೂರ್ಯನಿಗಾಗಿ ಬ್ರಿಟನ್ ವಿಜ್ಞಾನಿಗಳ ಪ್ರಯೋಗ: ಕುತೂಹಲಕಾರಿ ಸಂಶೋಧನೆಯ ಪೂರ್ಣ ವಿವರ..
ಎಂಟು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ಎಂದು ಸಂಜಯ್ ರಾವತ್ ಹೇಳಿದ್ದು, ನೆರೆಯ ಬಾಂಗ್ಲಾದಿಂದ ಭಾರತಕ್ಕೆ ಬರುವ ಅಕ್ರಮ ವಲಸಿಗರ ಕಾರಣದಿಂದಾಗಿ ಅಸ್ಸೋಂ, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಜನಸಂಖ್ಯೆಯೇ ಬದಲಾಗಿದೆ" ಎಂದು ರಾವತ್ ಸಾಮ್ನಾದಲ್ಲಿ ಬರೆದಿದ್ದಾರೆ.