ಬರೇಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬರೇಲಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಮುಸ್ಲಿಂ ವ್ಯಾಪಾರಿಯೊಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಪ್ರೇಮಿಗಳಿಬ್ಬರೂ ಎಸ್ಡಿಎಂ ಕೋರ್ಟ್ನಲ್ಲಿ ಮದುವೆಗೆ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ, ಮಹಿಳೆಯ ಸಹೋದರ ತನ್ನ ಸಹೋದರಿಯ ಬ್ರೈನ್‌ವಾಶ್ ಮಾಡಲಾಗಿದೆ ಎಂದು ಎಡಿಜಿಗೆ ಪತ್ರ ಬರೆದಿದ್ದಾರೆ. ಇದೊಂದು ಲವ್ ಜಿಹಾದ್ ಪ್ರಕರಣ ಎಂದೂ ಆರೋಪಿಸಿದ್ದಾರೆ.
ಮಾಹಿತಿ ಪ್ರಕಾರ, ಮೀರತ್ ನಿವಾಸಿಯಾದ ರೇಷು ಮಲಿಕ್ 2017ರ ಬ್ಯಾಚ್ನ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದಾರೆ. ಇವರ ಮೊದಲ ಪೋಸ್ಟಿಂಗ್ ಬಹೇದಿ ಪೊಲೀಸ್ ಠಾಣೆಯಲ್ಲಿ ಆಗಿದೆ. ಅಲ್ಲಿಯೇ ವಾಸವಿದ್ದ ಮರದ ವ್ಯಾಪಾರಿ ಮೊಹಮ್ಮದ್ ತಬೀಶ್ ಎಂಬಾತನಿಗೆ ಪರಿಚಯವಾಗಿದ್ದು, ಈ ಪರಿಚಯ ಪ್ರೇಮಕ್ಕೆ ತಿರುಗಿದೆ. ಹೀಗಾಗಿ ಇಬ್ಬರು ಕೂಡ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಂತೆಯೇ, ಜಾತಿ ಮತ್ತು ಧರ್ಮವನ್ನು ಬದಿಗಿಟ್ಟು ಇಬ್ಬರೂ ನ್ಯಾಯಾಲಯದ ವಿವಾಹಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಮತ್ತೊಂದೆಡೆ, ವಿರೋಧ ವ್ಯಕ್ತಪಡಿಸಿ ಇನ್ಸ್ಪೆಕ್ಟರ್ ರೇಷು ಮಲಿಕ್ ಅವರ ಸಹೋದರ ಎಡಿಜಿಗೆ ಪತ್ರ ಬರೆದಿದ್ದಾರೆ. ತಮ್ಮ ಸಹೋದರಿಯನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದಾರೆ. ತಮ್ಮ ಸಹೋದರಿಯ ಬ್ರೈನ್‌ವಾಶ್ ಮಾಡಲಾಗಿದೆ ಎಂದು ಆರೋಪಿಸಿದ್ದು, ಈಗಾಗಲೇ ಮುಸ್ಲಿಂ ಧಾರ್ಮಿಕ ಸ್ಥಳಗಳಿಗೆ ಆಕೆಯನ್ನು ಕರೆದುಕೊಂಡು ಹೋಗಿದ್ದರು ಎಂದೂ ದೂರಲಾಗಿದೆ.
ಪೊಲೀಸರಿಂದ ವರದಿ: ಇನ್ಸ್ಪೆಕ್ಟರ್ ರೇಷು ಮಲಿಕ್ ಮೂಲತಃ ಮೀರತ್‌ನವರಾಗಿದ್ದಾರೆ. ಬರೇಲಿಯ ಇಜ್ಜತ್‌ನಗರದಲ್ಲಿ ವಾಸಿಸುತ್ತಿದ್ದಾರೆ ಎಂದು ಉಪ ಜಿಲ್ಲಾ ಸದರ್ ಪ್ರತ್ಯೂಷ್ ಪಾಂಡೆ ತಿಳಿಸಿದ್ದಾರೆ. ಮೇ 16ರಂದು ಬಹೇದಿ ನಾಯ್ ಬಸ್ತಿ ಪಟ್ಟಣದಲ್ಲಿ ವಾಸವಾಗಿರುವ ಮರದ ವ್ಯಾಪಾರಿ ಮೊಹಮ್ಮದ್ ತಬಿಶ್ ಜೊತೆಗೆ ನ್ಯಾಯಾಲಯದ ವಿವಾಹಕ್ಕೆ ಅನುಮತಿ ರೇಷು ಮಲಿಕ್ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಪೊಲೀಸರಿಂದ ವರದಿ ಕೇಳಲಾಗಿತ್ತು.
ಜೂನ್ 13ರಂದು ಪೊಲೀಸರು ತಮ್ಮ ವರದಿಯನ್ನು ಮ್ಯಾಜಿಸ್ಟ್ರೇಟ್‌ಗೆ ಕಳುಹಿಸಿದ್ದಾರೆ. ಅದೇ ಸಮಯದಲ್ಲಿ ಮೊಹಮ್ಮದ್ ತಬಿಶ್ ನಿಕಾಹ್ ಅಥವಾ ಮದುವೆ ಆಗಲ್ಲ. ಆದರೆ, ನ್ಯಾಯಾಲಯದ ಮದುವೆಯನ್ನು ಮಾಡುತ್ತೇನೆ. ಇದರಿಂದಾಗಿ ನ್ಯಾಯಾಲಯದ ವಿವಾಹಕ್ಕೆ ಮ್ಯಾಜಿಸ್ಟ್ರೇಟ್‌ನಿಂದ ಅನುಮತಿ ಕೇಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಿಂದೂಯೇತರ ವ್ಯಕ್ತಿಯ ಮದುವೆಯಾದ ಯುವತಿ.. ಬದುಕಿರುವಾಗಲೇ ಪಿಂಡ ಪ್ರದಾನ ಮಾಡಿದ ಕುಟುಂಬಸ್ಥರು!
ಇತ್ತೀಚೆಗೆ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಹಿಂದೂಯೇತರ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕೆ ಜೀವಂತವಾಗಿರುವ ಮಗಳಿಗೆ ಕುಟುಂಬಸ್ಥರು ಅಂತಿಮ ವಿಧಿವಿಧಾನ ನೆರವೇರಿಸಿ ಪಿಂಡ ಪ್ರದಾನ ಮಾಡಿರುವ ಘಟನೆ ಬೆಳಕಿಗೆ ಬಂದಿತ್ತು. ಇಲ್ಲಿನ ಅಮ್ಖೇರಾ ಪ್ರದೇಶದ ಅನಾಮಿಕಾ ದುಬೆ ಎಂಬ ಯುವತಿ ಅನ್ಯ ಧರ್ಮದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಇದಕ್ಕೆ ಪೋಷಕರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು.
ಅಲ್ಲದೇ, ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ಆಕೆಯ ಮನವೊಲಿಸಲು ಪ್ರಯತ್ನಿಸುತ್ತಿದ್ದರು. ಆದರೂ, ಇದ್ಯಾವುದಕ್ಕೂ ಒಪ್ಪದ ಯುವತಿ ನ್ಯಾಯಾಲಯದ ಮೊರೆ ಹೋಗಿ ಮ್ಯಾಜಿಸ್ಟ್ರೇಟ್ ಮುಂದೆ ಆ ವ್ಯಕ್ತಿಯನ್ನೇ ಮದುವೆಯಾಗಿದ್ದಳು. ಆದ್ದರಿಂದ ಅನಾಮಿಕಾ ದುಬೆ ವಿರುದ್ಧ ಸಾಕಷ್ಟು ಅಸಮಾಧಾನಗೊಂಡಿದ್ದ ಆಕೆಯ ಕುಟುಂಬಸ್ಥರು ನರ್ಮದಾ ನದಿಯ ದಡದಲ್ಲಿ ಪಿಂಡ ಪ್ರದಾನ ಮಾಡಿದ್ದರು.