ವಿಲ್ಲುಪುರಂ (ತಮಿಳುನಾಡು): ದೇವಸ್ಥಾನ ಪ್ರವೇಶ ಕುರಿತ ವಿವಾದದಿಂದಾಗಿ ತಮಿಳುನಾಡಿನಲ್ಲಿ ಹಿಂದು ದೇವಾಲಯಕ್ಕೆ ಬೀಗ ಹಾಕಿ ಬಂದ್ ಮಾಡಲಾಗಿದೆ. ಇಲ್ಲಿನ ವಿಲ್ಲುಪುರಂನಲ್ಲಿ ದೇವಸ್ಥಾನದಲ್ಲಿ ಅಸ್ಪೃಶ್ಯತೆ ಆಚರಣೆ ನಡೆಯುತ್ತಿದೆ ಎಂಬ ಆಪಾದನೆಯ ಹಿನ್ನೆಲೆಯಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆಯುತ್ತಿತ್ತು. ಇದೀಗ ಸಂಘರ್ಷ ತಪ್ಪಿಸಲು ತಮಿಳುನಾಡು ಸರ್ಕಾರ ದೇವಾಲಯವನ್ನು ಬಂದ್ ಮಾಡಿಸಿದೆ.
ವಿವರ: ಮೇಲ್ಪತಿ ಗ್ರಾಮದ ಧರ್ಮರಾಜ ದ್ರೌಪದಿ ಅಮ್ಮನ್ ದೇವಸ್ಥಾನ ವಿವಾದಕ್ಕೀಡಾಗಿದೆ. ಪ್ರವೇಶಕ್ಕೆ ಸಂಬಂಧಿಸಿದಂತೆ ಕೆಲವು ಪ್ರಬಲ ಜಾತಿಯವರು ಮತ್ತು ಕೆಳ ಜಾತಿ ನಡುವೆ ಜಗಳ ಏರ್ಪಟ್ಟಿದೆ. ಕೆಳ ಜಾತಿಯವರಿಗೆ ದೇವಾಲಯ ಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ವಿವಾದದ ಹಿನ್ನೆಲೆಯಲ್ಲಿ ವಿಲ್ಲುಪುರಂ ಜಿಲ್ಲಾ ಕಂದಾಯ ಆಯುಕ್ತ ರವಿಚಂದ್ರನ್ ಬುಧವಾರ ಸೀಲ್ ಹಾಕುವಂತೆ ಆದೇಶಿಸಿದರು.
ದೇವಾಲಯದ ದ್ವಾರಗಳನ್ನು ಮುಚ್ಚಿ ಬೀಗ ಹಾಕಿ ಸೀಲ್ ಹಾಕಲಾಗಿದೆ. ಅಲ್ಲದೇ, ದೇಗುಲದ ಮುಂದೆ ಅಧಿಕೃತ ನೋಟಿಸ್ ಅಂಟಿಸಲಾಗಿದ್ದು, "ಗ್ರಾಮದಲ್ಲಿ ಎರಡು ಜಾತಿಗಳ ನಡುವಿನ ಸಮಸ್ಯೆಯಿಂದಾಗಿ ವಾತಾವರಣ ಕಲುಷಿತವಾಗಿದೆ. ಇದು ಕಾನೂನು ಮತ್ತು ಸುವ್ಯವಸ್ಥೆಗೆ ತೊಡಕುಂಟಾಗಲಿದೆ. ಇದನ್ನು ಪರಿಗಣಿಸಿ, ಮುಂದಿನ ತೀರ್ಮಾನಕ್ಕೆ ಬರುವವರೆಗೆ ಎರಡೂ ಜಾತಿಗಳಿಗೆ ದೇವಸ್ಥಾನದೊಳಗೆ ಪ್ರವೇಶವಿಲ್ಲ" ಎಂದು ಬರೆಯಲಾಗಿದೆ.
ಇದಕ್ಕೂ ಮುನ್ನ, ವಿಲ್ಲುಪುರಂ ಸಂಸದ ರವಿಕುಮಾರ್ ನೇತೃತ್ವದ ಸರ್ವಪಕ್ಷ ನಿಯೋಗ ಜಿಲ್ಲಾಧಿಕಾರಿ ಸಿ.ಪಳನಿ ಅವರನ್ನು ಭೇಟಿ ಮಾಡಿ, ದ್ರೌಪದಿ ಅಮ್ಮನ್ ದೇವಸ್ಥಾನಕ್ಕೆ ಯಾವುದೇ ಜಾತಿ ಭೇದವಿಲ್ಲದೆ ಎಲ್ಲ ಭಕ್ತರಿಗೆ ಪ್ರವೇಶ ನೀಡುವಂತೆ ಮನವಿ ಸಲ್ಲಿಸಿತು. ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಜಾತಿ ಬೇಧವಿಲ್ಲದೆ ಎಲ್ಲ ಭಕ್ತರಿಗೂ ದೇವಸ್ಥಾನದ ಒಳಗೆ ಪ್ರವೇಶ ಕಲ್ಪಿಸಬೇಕು. ಆದಿ ದ್ರಾವಿಡರನ್ನು ದೇಗುಲ ಪ್ರವೇಶಿಸದಂತೆ ತಡೆಯುವವರ ವಿರುದ್ಧ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಧ್ಯಪ್ರದೇಶದಲ್ಲೂ ವಿವಾದ: ದೇವಸ್ಥಾನ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯಲ್ಲಿ ಪ್ರತ್ಯೇಕ ಎರಡು ಕೇಸ್ ದಾಖಲಾಗಿದೆ. ಅಲ್ಲದೇ, ವ್ಯಾಜ್ಯಗಳಿಗೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಛಪ್ರ ಗ್ರಾಮದಲ್ಲಿ ದಲಿತ ಸಮುದಾಯ, ಇನ್ನೂ ಮೂರು ಸಮುದಾಯದೊಂದಿಗೆ ಸೇರಿ ದೇಗುಲ ನಿರ್ಮಾಣ ಮಾಡಿತ್ತು. ಇದರ ಪ್ರವೇಶದ ವಿಚಾರದಲ್ಲಿ ಸಂಘರ್ಷ ಉಂಟಾಗಿತ್ತು. ಎರಡೂ ಗುಂಪುಗಳು ಕಲ್ಲು ತೂರಾಟ ನಡೆಸಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದರು. ಕಾಸ್ರವಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ದೇವಸ್ಥಾನಕ್ಕೆ ಪ್ರವೇಶಿಸಲು ಅಡ್ಡಿ ಮಾಡಿದರು ಎಂದು ದಲಿತ ಮಹಿಳೆಯೊಬ್ಬರು ಆರೋಪಿಸಿದ್ದರು. ಬಳಿಕ ಪೊಲೀಸ್ ಭದ್ರತೆಯಲ್ಲಿ ಮಹಿಳೆ ದೇಗುಲ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದರು.
ಇದಕ್ಕೂ ಎರಡು ದಿನ ಮುನ್ನ ದಲಿತ ಸಮುದಾಯದ ಸದಸ್ಯರು ದೇಗುಲ ಸಮೀಪದ ಭೂಮಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದರು. ಇಲ್ಲಿಂದ ವ್ಯಾಜ್ಯ ಆರಂಭವಾಗಿತ್ತು. ಪೊಲೀಸರು ಮತ್ತು ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ವ್ಯಾಜ್ಯ ಬಗೆಹರಿಸಿದ್ದರು. ಆದಾಗ್ಯೂ ದೇಗುಲ ಪ್ರವೇಶಿಸಲು ಅಡ್ಡಿ ಮಾಡಿದರು ಎಂದು ಆರೋಪಿಸಿ ದಲಿತ ಸಮುದಾಯದ ಸದಸ್ಯರು 42 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ಮತ್ತೊಂದು ಗುಂಪು ಸಹ 58 ಜನರ ವಿರುದ್ಧ ಪ್ರತಿದೂರು ದಾಖಲಿಸಿತ್ತು.
ಇದನ್ನೂ ಓದಿ: ಔರಂಗಜೇಬ್, ಟಿಪ್ಪು ಪೋಸ್ಟ್ ವಿರುದ್ಧ ಪ್ರತಿಭಟನೆ: ಪೊಲೀಸರಿಂದ ಲಾಠಿ ಪ್ರಹಾರ