ಕೋಲ್ಕತ್ತಾ(ಪಶ್ಚಿಮ ಬಂಗಾಳ): ಸಮುದಾಯ-ಸಮುದಾಯಗಳ ಮಧ್ಯೆ ತಿಕ್ಕಾಟ, ಗಲಭೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು 'ಮಾನವೀಯತೆ ಎಂಬುದು ಒಂದು ಸಾಗರ: ಸಮುದ್ರದ ಕೆಲವು ಹನಿಗಳು ಕೊಳಕಾದರೆ, ಸಾಗರ ಕೊಳಕಾಗಬಲ್ಲದೇ' ಎಂದಿದ್ದರು. ಈ ಮಾತನ್ನು ಕೋಲ್ಕತ್ತಾದ ಜನರು ನಿಜವಾಗಿಸಿದ್ದಾರೆ.
ಹೌದು, ಕೋಲ್ಕತ್ತಾದ ತಾಲಾ ಪಾರ್ಕ್ನ ಹಿಂದೂ, ಮುಸ್ಲಿಂ, ಬೌದ್ಧ ಸಮುದಾಯದ ಜನರು 55 ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯವನ್ನು 25 ಲಕ್ಷ ರೂ. ಖರ್ಚು ಮಾಡಿ ಜೀರ್ಣೋದ್ಧಾರ ಮಾಡಿದ್ದಾರೆ. ಎಲ್ಲರ ಸಹಕಾರದಿಂದ ಶಿವ ದೇವಾಲಯ ಇಂದು ಕಳೆಗಟ್ಟಿದೆ. ಈ ದೇವಸ್ಥಾನದಲ್ಲಿ ವಿತರಿಸಲಾಗುವ ಬಾಗ್(ಪ್ರಸಾದ) ಅನ್ನು ಎಲ್ಲ ಸಮುದಾಯದ ಜನರು ಗೌರವಪೂರ್ವಕವಾಗಿ ಸ್ವೀಕರಿಸಿ ಏಕತೆಯ ಸಂದೇಶವನ್ನು ಸಾರಿದ್ದಾರೆ.
ಸರ್ವ ಜನಾಂಗದ ಸಮಿತಿ: ವಿವಿಧ ಸಮುದಾಯದ ಜನರು ತಮ್ಮೆಲ್ಲ ಕೆಲಸಗಳನ್ನು ಮುಗಿಸಿಕೊಂಡು ಬಂದು ದೇವಸ್ಥಾನದ ಮುಂದೆ ಸೇರುತ್ತಾರೆ. ಬಳಿಕ ಹಲವು ವಿಚಾರಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ದೇವಾಲಯದ ಸಮಿತಿಯು ಸಮಾಜದ ಎಲ್ಲ ಸಮುದಾಯಗಳ ಜನರನ್ನೂ ಒಳಗೊಂಡಿರುವುದು ಇಲ್ಲಿನ ವಿಶೇಷವಾಗಿದೆ. ದೇವಸ್ಥಾನದ ಸಮಿತಿಗೆ ಶಿವಶಕ್ತಿ ಎಂದು ಹೆಸರಿಸಲಾಗಿದ್ದು, ಮುಸ್ಲಿಂ ಸಮುದಾಯದ ಅಫ್ತಾಬ್ ಖಾನ್ ಅದರ ಉಪಾಧ್ಯಕ್ಷರಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ‘ಶಿವ ದೇಗುಲಕ್ಕೆ 55 ವರ್ಷ ತುಂಬಿದೆ. ದೇಗುಲದ ಪಕ್ಕದಲ್ಲಿದ್ದ ರಸ್ತೆ ಅಗಲೀಕರಣದ ನಂತರ ಅದರ ಸೌಂದರ್ಯ ಕುಗ್ಗಿತು. ಹೀಗಾಗಿ, ಎಲ್ಲ ಸಮುದಾಯದ ಜನರು ಚರ್ಚಿಸಿ ದೇವಸ್ಥಾನದ ನವೀಕರಣಕ್ಕೆ ಮುಂದಾದೆವು. ಬಳಿಕ ಜನರಿಂದಲೇ ಹಣ ಸಂಗ್ರಹಿಸಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗಿದೆ ಎಂದರು.
ದೇವಸ್ಥಾನದ ವಿವಿಧ ಕಾರ್ಯಕ್ರಮಗಳಿಗೆ ಸಾವಿರ, ಎರಡು ಸಾವಿರ ರೂಪಾಯಿ ಹೊಂದಿಸುವುದೂ ಈ ಹಿಂದೆ ಕಷ್ಟವಾಗಿತ್ತು. ಆದರೆ, ಅಚ್ಚರಿ ಎಂಬಂತೆ ದೇವಸ್ಥಾನದ ಜೀರ್ಣೋದ್ಧಾರದ ವಿಚಾರ ಕೇಳಿ ಎಲ್ಲರೂ ತಮ್ಮ ಕೈಲಾದಷ್ಟು ಹಣ ನೀಡಿದರು. ಹೀಗೆ 25 ಲಕ್ಷ ರೂಪಾಯಿ ಸಂಗ್ರಹವಾಗಿ ದೇವಾಲಯವನ್ನು ನವೀಕರಿಸಲಾಗಿದೆ ಎಂದು ಸಮಿತಿಯ ಸಹಾಯಕ ಕಾರ್ಯದರ್ಶಿ ಬಿ.ಕೆ. ಪಾಠಕ್ ಮಾಹಿತಿ ನೀಡಿದರು.
ಓದಿ: ಕಬಿನಿಯಿಂದ ಹೊರ ಹರಿವು ಹೆಚ್ಚಳ: ಮೊದಲ ಬಾರಿಗೆ ನಂಜನಗೂಡಿನ ಪರಶುರಾಮ ದೇವಾಲಯ ಮುಳುಗಡೆ