ಗುವಾಹಟಿ(ಅಸ್ಸೋಂ) : ಬಡತನವನ್ನು ಕಡಿಮೆ ಮಾಡಲು ಜನಸಂಖ್ಯೆ ನಿಯಂತ್ರಣಕ್ಕಾಗಿ ಅಲ್ಪಸಂಖ್ಯಾತ ಸಮುದಾಯವು ‘ಯೋಗ್ಯ ಕುಟುಂಬ ಯೋಜನೆ ನೀತಿ‘ ಎಂಬುದನ್ನು ಅಳವಡಿಸಿಕೊಳ್ಳಬೇಕು ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅಲ್ಪಸಂಖ್ಯಾತ ಸಮುದಾಯದ ಮುಖಂಡರನ್ನು ಒತ್ತಾಯಿಸಿದ್ದಾರೆ.
ಬಡತನವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಸರ್ಕಾರವನ್ನು ಬೆಂಬಲಿಸಲು ಮುಂದಾಗಬೇಕು. ಅಡೆತಡೆಯಿಲ್ಲದ ಹೆಚ್ಚಳವಾಗಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಮುಂದೆ ಬರಬೇಕು ಎಂದು ಮುಖ್ಯಮಂತ್ರಿಗಳು, ತಮ್ಮ ಸರ್ಕಾರ 30 ದಿನ ಪೂರ್ಣಗೊಂಡ ಸಂದರ್ಭದಲ್ಲಿ ಹೇಳಿದರು. ಸರ್ಕಾರವು ಎಲ್ಲಾ ಬಡ ಜನರ ರಕ್ಷಕನಾಗಿದೆ.
ಆದರೆ, ಬಡತನ, ಅನಕ್ಷರತೆ ಮತ್ತು ಸರಿಯಾದ ಕುಟುಂಬ ಯೋಜನೆಯ ಕೊರತೆಯ ಮೂಲ ಕಾರಣವಾಗಿರುವ ಜನಸಂಖ್ಯೆ ಬೆಳವಣಿಗೆಯ ಸಮಸ್ಯೆಯನ್ನು ನಿಭಾಯಿಸುವಲ್ಲಿ ಅಲ್ಪಸಂಖ್ಯಾತ ಸಮುದಾಯದ ಬೆಂಬಲ ಬೇಕು ಎಂದಿದ್ದಾರೆ. ಸಮುದಾಯದ ಮಹಿಳೆಯರಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತದೆ.
ಇದರಿಂದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು ಎಂದು ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಸಮುದಾಯದ ಮುಖಂಡರು ಜನರಿಗೆ ಜನಸಂಖ್ಯೆ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದ್ದಾರೆ.
ಓದಿ: ಕಮ್ಯುನಿಸಂ, ಲೆನಿನಿಸಂ ಸಹೋದರರ ನೇತೃತ್ವದಲ್ಲಿ ಮಮತಾ ಬ್ಯಾನರ್ಜಿ ಕೈಹಿಡಿದ ಸೋಸಿಯಲಿಸಂ..