ಶಿಮ್ಲಾ (ಹಿಮಾಚಲ ಪ್ರದೇಶ): ನವೆಂಬರ್ 12 ರಂದು ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಸಮ್ಮುಖದಲ್ಲಿ ಶನಿವಾರ ಪ್ರಣಾಳಿಕೆ ಬಿಡುಗಡೆಯಾಗಿದೆ.
ಹಳೆಯ ಪಿಂಚಣಿ ಯೋಜನೆ ಜಾರಿ, 300 ಯೂನಿಟ್ ಉಚಿತ ವಿದ್ಯುತ್ ಮತ್ತು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 10 ಕೋಟಿ ರೂ. ಸ್ಟಾರ್ಟ್‌ಅಪ್ ನಿಧಿಯನ್ನು ಜಾರಿಗೆ ತರುವುದಾಗಿ ಪಕ್ಷ ಭರವಸೆ ನೀಡಿದೆ. ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಹಿಮಾಚಲದ ಎಐಸಿಸಿ ಉಸ್ತುವಾರಿ ರಾಜೀವ್ ಶುಕ್ಲಾ, ಮಾಜಿ ಪಿಸಿಸಿ ಮುಖ್ಯಸ್ಥ ಸುಖವಿಂದರ್ ಸಿಂಗ್ ಸುಖು ಮತ್ತು ಎಐಸಿಸಿ ಕಾರ್ಯದರ್ಶಿಗಳಾದ ತೇಜಿಂದರ್ ಪಾಲ್ ಬಿಟ್ಟು ಮತ್ತು ಮನೀಶ್ ಚತ್ರತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಧನಿ ರಾಮ್ ಶಾಂಡಿಲ್ ಮಾತನಾಡಿ, ಬಿಜೆಪಿ ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಮತ್ತು ಐದು ವರ್ಷಗಳ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಇದು ಕೇವಲ ಚುನಾವಣಾ ಪ್ರಣಾಳಿಕೆ ಅಲ್ಲ. ಹಿಮಾಚಲ ಪ್ರದೇಶದ ಜನರ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಸಿದ್ಧಪಡಿಸಿದ ದಾಖಲೆಯಾಗಿದೆ ಎಂದು ಶಾಂಡಿಲ್ ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯನ್ನು ನೆಚ್ಚಿಕೊಂಡಿರುವ ಕಾಂಗ್ರೆಸ್, ರಾಜ್ಯದಲ್ಲಿ ಬಿಜೆಪಿಯನ್ನು ಮರು ಆಯ್ಕೆ ಮಾಡದಂತೆ ಮತದಾರರ ಮನವೊಲಿಸುವ ಪ್ರಯತ್ನ ಮಾಡುತ್ತಿದೆ.
ಇದನ್ನೂ ಓದಿ: ಶಶಿ ತರೂರ್ ಪ್ರಣಾಳಿಕೆಯ ನಕ್ಷೆಯಲ್ಲಿ ಕಾಶ್ಮೀರ ಮಾಯ.. ಭೇಷರತ್ ಕ್ಷಮೆ ಕೋರಿದ ಹಿರಿಯ ಕಾಂಗ್ರೆಸ್ಸಿಗ