ಶಿಮ್ಲಾ( ಹಿಮಾಚಲಪ್ರದೇಶ): ಪ್ರತಿಪಕ್ಷಗಳು ವಂಶಪಾರಂಪರ್ಯ ರಾಜಕೀಯ ಮಾಡುತ್ತವೆ ಎಂದು ಭಾರತೀಯ ಜನತಾ ಪಕ್ಷ ಆಗಾಗ ತನ್ನ ಎದುರಾಳಿಗಳನ್ನು ಕಟುವಾಗಿ ಟೀಕಿಸುತ್ತಿರುತ್ತದೆ. ಆದರೆ, ಮುಂದಿನ ತಿಂಗಳು ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ ಸ್ವತಃ ಸ್ವಜನಪಕ್ಷಪಾತ ಮತ್ತು ವಂಶಪಾರಂಪರ್ಯ ರಾಜಕಾರಣದ ಮೊರೆ ಹೋಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಜುಬ್ಬಲ್ ಕ್ಷೇತ್ರದಿಂದ ಮಾಜಿ ಸಚಿವ ನರೇಂದ್ರ ಬ್ರಗಟಾ ಅವರ ಪುತ್ರ ಚೇತನ್ ಬ್ರಗಟಾ ಮತ್ತು ಧರಂಪುರದಿಂದ ಕ್ಯಾಬಿನೆಟ್ ಸಚಿವ ಮಹೇಂದ್ರ ಸಿಂಗ್ ಠಾಕೂರ್ ಅವರ ಪುತ್ರ ರಜತ್ ಠಾಕೂರ್ ಅವರಿಗೆ ಕುಟುಂಬಗಳ ರಾಜಕೀಯ ಪ್ರಭಾವದಿಂದಾಗಿ ಟಿಕೆಟ್ ನೀಡುತ್ತಿದ್ದು, ಇದು ಬಿಜೆಪಿಯ ಸ್ವಜನಪಕ್ಷಪಾತ ಎಂಬ ವ್ಯಾಪಕ ಟೀಕೆಗೆ ಒಳಗಾಗಿದೆ.
ಉಪಚುನಾವಣೆಯಲ್ಲಿ ಟಿಕೆಟ್ ಸಿಗದ ಬ್ರಗಟಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇವರ ಎದುರು ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ನೀಲಂ ಸಾರಾಯಿಕ್ ಠೇವಣಿ ಕಳೆದುಕೊಂಡಿದ್ದರು. ಆ ಕಾರಣಕ್ಕಾಗಿಯೇ ಈಗ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬ್ರಗಟಾ ಅವರಿಗೆ ಟಿಕೆಟ್ ನೀಡಲಾಗಿದೆ. ಅದೇ ರೀತಿ ಹಿಮಾಚಲದ ಜೈ ರಾಮ್ ಸರ್ಕಾರದ ಸಚಿವ ಮಹೇಂದ್ರ ಸಿಂಗ್ ಠಾಕೂರ್ ಅವರಿಗೆ ಟಿಕೆಟ್ ನಿರಾಕರಿಸಿದ್ದಕ್ಕೆ, ಅವರು ತಮ್ಮ ಮಗ ರಜತ್ ಠಾಕೂರ್ ಅವರಿಗೆ ಧರಂಪುರ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಲಾಬಿ ನಡೆಸಿದ್ದರು.
ಬೇಡಿಕೆಗೆ ಮಣಿದ ಹೈಕಮಾಂಡ್: ಧರಂಪುರ ಕ್ಷೇತ್ರದಲ್ಲಿ ಮಹೇಂದ್ರ ಸಿಂಗ್ ಪ್ರಬಲ ನಾಯಕರಾಗಿರುವುದರಿಂದ ಹೈಕಮಾಂಡ್ ಅವರ ಬೇಡಿಕೆಗೆ ಮಣಿಯಲೇಬೇಕಾಗಿದೆ. ಮಹೇಂದ್ರ ಸಿಂಗ್ ಠಾಕೂರ್ ಅವರ ಪುತ್ರಿ ವಂದನಾ ಗುಲೇರಿಯಾ ಕೂಡ ಟಿಕೆಟ್ ಬಯಸಿದ್ದರು. ಆದರೆ. ರಜತ್ ಅವರಿಗೆ ಟಿಕೆಟ್ ನೀಡಿದಾಗ ವಂದನಾ ಗುಲೇರಿಯಾ ಬಂಡಾಯವೆದ್ದರು.
ವಾಸ್ತವವಾಗಿ ಮಾಜಿ ಸಿಎಂ ಪ್ರೇಮ್ ಕುಮಾರ್ ಧುಮಾಲ್ ಅವರ ಪುತ್ರ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಕೂಡ ತಮ್ಮ ಕುಟುಂಬದ ಪ್ರಭಾವದ ಆಧಾರದ ಮೇಲೆಯೇ ರಾಷ್ಟ್ರ ರಾಜಕಾರಣಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತದೆ.
ಕುಟುಂಬಗಳಿಗೆ ಮಣೆ: ಅದೇ ರೀತಿ ಬಿಜೆಪಿ ನಾಯಕ ಬಲದೇವ್ ಶರ್ಮಾ ಅವರ ಪತ್ನಿ ಮಾಯಾ ಶರ್ಮಾ ಅವರು ಹಮೀರ್‌ಪುರದ ಬದ್ಸರ್ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ. ಕುಲುವಿನ ಗೋವಿಂದ್ ಸಿಂಗ್ ಠಾಕೂರ್, ಪ್ರಸ್ತುತ ಸರ್ಕಾರದಲ್ಲಿ ಸಚಿವ ಮತ್ತು ಕುಂಜ್ಲಾಲ್ ಠಾಕೂರ್ ಅವರ ಪುತ್ರ ಮನಾಲಿ ಕ್ಷೇತ್ರದಿಂದ ಟಿಕೆಟ್ ಪಡೆದುಕೊಂಡಿದ್ದಾರೆ. ಸೋಲನ್ ಕ್ಷೇತ್ರದಿಂದ ರಾಜೇಶ್ ಕಶ್ಯಪ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಅವರ ಸಹೋದರ ವೀರೇಂದ್ರ ಕಶ್ಯಪ್ ಎರಡು ಬಾರಿ ಶಿಮ್ಲಾ ಕ್ಷೇತ್ರದಿಂದ ಸಂಸದರಾಗಿದ್ದಾರೆ.
ಹಮೀರ್‌ಪುರ ಜಿಲ್ಲೆಯ ಭೋರಂಜ್ ಕ್ಷೇತ್ರದಿಂದ ಅನಿಲ್ ಧಿಮಾನ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ನರೇಂದ್ರ ಠಾಕೂರ್ ಹಮೀರ್‌ಪುರ ಕ್ಷೇತ್ರದಿಂದಲೇ ಟಿಕೆಟ್ ಪಡೆದಿದ್ದಾರೆ. ಅವರು ಹಿರಿಯ ಸಂಘ ಮತ್ತು ಬಿಜೆಪಿ ನಾಯಕ ಜಗದೇವ್ ಠಾಕೂರ್ ಅವರ ಪುತ್ರ.
ಮಂಡಿ ಕ್ಷೇತ್ರದಲ್ಲಿ ಪಂಡಿತ್ ಸುಖರಾಮ್ ಅವರ ಪುತ್ರ ಅನಿಲ್ ಶರ್ಮಾ ಬಿಜೆಪಿಯಿಂದ ಸತತ ಎರಡನೇ ಬಾರಿಗೆ ಅಭ್ಯರ್ಥಿಯಾಗಿದ್ದಾರೆ. 2017 ರ ಮೊದಲು, ಇಡೀ ಕುಟುಂಬ ಕಾಂಗ್ರೆಸ್‌ನಲ್ಲಿತ್ತು ಮತ್ತು ಅನಿಲ್ ಶರ್ಮಾ ಆಗ ವೀರಭದ್ರ ಸಿಂಗ್ ಸರ್ಕಾರದಲ್ಲಿ ಸಚಿವರಾಗಿದ್ದರು. ಪಂಡಿತ್ ಸುಖ್ ರಾಮ್ ಕೂಡ ಕೇಂದ್ರ ಸಚಿವರಾಗಿದ್ದರು ಮತ್ತು ಹಿಮಾಚಲ ರಾಜಕೀಯದ ದೊಡ್ಡ ನಾಯಕರಾಗಿದ್ದರು.
ಅನಿಲ್ ಶರ್ಮಾ ಅವರ ಪುತ್ರ ಆಶ್ರಯ್ ಶರ್ಮಾ ಕೂಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಮಂಡಿಯಿಂದ ಸ್ಪರ್ಧಿಸಿ ಬಿಜೆಪಿಯ ರಾಮಸ್ವರೂಪ್ ಶರ್ಮಾ ವಿರುದ್ಧ ಸೋತಿದ್ದರು.
ಹೀಗೆ ಹಲವಾರು ಘಟಾನುಘಟಿ ನಾಯಕರ ಮಕ್ಕಳಿಗೆ, ಸಂಬಂಧಿಕರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಕೂಡ ವಂಶಪಾರಂಪರ್ಯ ರಾಜಕಾರಣ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಮಾಡುತ್ತಿರುವ ಆರೋಪ ಸಂಪೂರ್ಣ ಸುಳ್ಳೇನಲ್ಲ.
ಇದನ್ನೂ ಓದಿ: ಹಿಮಾಚಲ ಪ್ರದೇಶಕ್ಕೆ ಚುನಾವಣಾ ದಿನಾಂಕ ಘೋಷಣೆ: ಗುಜರಾತ್ ಚುನಾವಣೆ ವಿಳಂಬ