ನವದೆಹಲಿ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಕರ್ನಾಟಕದ ಹಿಜಾಬ್ ಪ್ರಕರಣದ ವಿಚಾರಣೆ ಮುಂದುವರೆದಿದೆ. ಸರ್ವೋಚ್ಛ ನ್ಯಾಯಾಲಯದಲ್ಲಿ ಇಂದೂ ಸಹ ರಾಜ್ಯ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಲಿದ್ದಾರೆ. ಆದರೆ, ನಿನ್ನೆಯ ದಿನ ಕೋರ್ಟ್‌ನಲ್ಲಿ ಏನೆಲ್ಲ ನಡೀತು ಎಂಬುದರ ವಿವರ ಇಲ್ಲಿದೆ.
ಸರ್ಕಾರದ ಪರ ವಕೀಲ ತುಷಾರ್ ಮೆಹ್ತಾ ವಾದ: ಹಿಜಾಬ್ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ. ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಮಹಿಳೆಯರು ಅದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇಸ್ಲಾಂನಲ್ಲಿ ಹಿಜಾಬ್ ಕಡ್ಡಾಯವಾಗಿರುವ ಧಾರ್ಮಿಕ ಆಚರಣೆಯೂ ಅಲ್ಲ. ಕುರಾನ್ನಲ್ಲಿ ಕೇವಲ ಉಲ್ಲೇಖವಿದೆಯಷ್ಟೇ. ಆದರೆ, ಅತ್ಯಗತ್ಯವೆಂದು ಎಲ್ಲಿಯೂ ಹೇಳಿಲ್ಲ. 2021ರ ತನಕ ಯಾವುದೇ ಹೆಣ್ಣು ಮಕ್ಕಳು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಿರಲಿಲ್ಲ. ಆದರೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಆರಂಭಿಸಿದ ಸಾಮಾಜಿಕ ಮಾಧ್ಯಮ ಆಂದೋಲನದಿಂದ ಈ ವಿವಾದ ಸೃಷ್ಟಿಯಾಗಿದೆ ಎಂದು ಕರ್ನಾಟಕ ಸರ್ಕಾರದ ಪರ ವಕೀಲ ತುಷಾರ್ ಮೆಹ್ತಾ ವಾದ ಮಂಡಿಸಿದರು.
ಪಿಎಫ್‌ಐ ಆಂದೋಲನ ಕಾರಣ: ಹಿಜಾಬ್ ಹಾಕಿಕೊಳ್ಳುವುದರ ಹಿಂದೆ ದೊಡ್ಡ ಮಟ್ಟದ ಪಿತೂರಿ ಅಡಗಿದೆ. 2022ರಲ್ಲಿ ಪಿಎಫ್‌ಐ ಸಾಮಾಜಿಕ ಮಾಧ್ಯಮಗಳಲ್ಲಿ ಯುವತಿಯರು ಹಿಜಾಬ್ ಹಾಕಿಕೊಳ್ಳುವಂತೆ ಅಭಿಯಾನ ಆರಂಭಿಸಿತ್ತು. ಇದರಲ್ಲಿ ಭಾಗಿಯಾಗಿರುವ ಕೆಲ ವಿದ್ಯಾರ್ಥಿನಿಯರು ಸಂಘಟನೆಯ ಸೂಚನೆಯಂತೆ ವರ್ತಿಸುತ್ತಿದ್ದಾರೆ ಎಂದು ಅವರು ಕೋರ್ಟ್‌ಗೆ ಮನವರಿಕೆ ಮಾಡಿದರು.
ಇದನ್ನೂ ಓದಿ: ಹಿಜಾಬ್ ಪ್ರಕರಣ: ವಿಚಾರಣೆ ಮುಂದುವರಿಸಿದ ಸುಪ್ರೀಂ ಕೋರ್ಟ್
ಅರ್ಜಿದಾರರ ಪರ ವಾದಿಸಿದ ವಕೀಲ ದುಶ್ಯಂತ್ ದವೆ: ಇದಕ್ಕೂ ಮೊದಲು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯ ಬಗ್ಗೆ ವಾದಿಸಿದರು. ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸುವುದು ಯಾವುದೇ ವ್ಯಕ್ತಿಯ ಭಾವನೆಗಳನ್ನು ನೋಯಿಸುತ್ತದೆ ಎಂದು ಹೇಳಲಾಗುವುದಿಲ್ಲ. ಮೊದಲು ಲವ್ ಜಿಹಾದ್ ದೊಡ್ಡ ವಿಷಯವಾಗಿತ್ತು. ಈಗ ವಿಷಯ ಹಿಜಾಬ್ ಮೇಲಿನ ನಿಷೇಧದವರೆಗೆ ಬಂದಿದೆ. ಇದೆಲ್ಲವೂ ಭಾರತದಲ್ಲಿ ಮುಸ್ಲಿಂ ಸಮುದಾಯವನ್ನು ಕಡೆಗಣಿಸುವ ಹುನ್ನಾರ ಹೊಂದಿದೆ ಎಂದು ದೂರಿದರು.