ಮೆಹಬೂಬ್ನಗರ, ತೆಲಂಗಾಣ: ಭಾರತ್ ರಾಷ್ಟ್ರ ಸಮಿತಿ ಮುಖಂಡ, ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ನಲ್ಲಿ ಹಠಾತ್ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದು, ತುರ್ತು ಭೂಸ್ಪರ್ಶ ಮಾಡಿದೆ. ವಿಧಾನಸಭೆ ಚುನಾವಣಾ ಪ್ರಚಾರದ ನಿಮಿತ್ತ ದೇವರಕದ್ರದ ಪ್ರಜಾ ಆಶೀರ್ವಾದ ಸಭೆಗೆ ತೆರಳುತ್ತಿದ್ದಾಗ, ಹೆಲಿಕಾಪ್ಟರ್ನಲ್ಲಿ ಈ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
ಪೈಲಟ್ ಕೂಡಲೇ ಹೆಲಿಕಾಪ್ಟರ್ ಮಾರ್ಗ ಬದಲಿಸಿ ಪುನಃ ಎರ್ರವಳ್ಳಿಯಲ್ಲಿರುವ ಫಾರ್ಮ್ಹೌಸ್ನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. ವಿಮಾನಯಾನ ಸಂಸ್ಥೆ ಪರ್ಯಾಯ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದು, ಮತ್ತೊಂದು ಹೆಲಿಕಾಪ್ಟರ್ ಮೂಲಕ ಮುಖ್ಯಮಂತ್ರಿ ಕೆಸಿಆರ್ ಎಂದಿನಂತೆ ತಮ್ಮ ಪ್ರವಾಸ ಮುಂದುವರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಚುನಾವಣೆ ಹಿನ್ನೆಲೆಯಲ್ಲಿ ಇತರ ಪಕ್ಷಗಳಿಗಿಂತ ಮೊದಲೇ ಅಭ್ಯರ್ಥಿಗಳನ್ನು ಘೋಷಿಸಿರುವ ಭಾರತ್ ರಾಷ್ಟ್ರ ಸಮಿತಿ (BRS) ಪ್ರಚಾರದ ಅಂಗವಾಗಿ ಇಂದು ಪ್ರಜಾ ಆಶೀರ್ವಾದ ಸಭೆ ಏರ್ಪಡಿಸಿತ್ತು. ಅಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಹಿರಂಗ ಸಭೆಯನ್ನುದ್ದೇಶಿಸಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಮಾತನಾಡಬೇಕಿತ್ತು. ಆದರೆ, ಅವರು ತೆರಳುತ್ತಿದ್ದ ಹೆಲಿಕಾಪ್ಟರ್ನಲ್ಲಿ ಹಠಾತ್ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಪರಿಣಾಮ ಪರ್ಯಾಯ ಹೆಲಿಕಾಪ್ಟರ್ ಮೂಲಕ ಪೂರ್ವನಿರ್ಧರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವ ಸಿಎಂ ಕೆಸಿಆರ್, ಬಿಆರ್ಎಸ್ ಪಕ್ಷದ ವತಿಯಿಂದ ಇಂದು ಆಯೋಜಿಸಲಾಗಿದ್ದ 4 ಜನಾಶೀರ್ವಾದ ಸಭೆಗಳಲ್ಲಿ ಭಾಗವಹಿಸಬೇಕಿತ್ತು. ದೇವರಕದ್ರ, ನಾರಾಯಣಪೇಟೆ, ಮಕ್ತಲ್, ಗದ್ವಾಲ್ನಲ್ಲಿ ನಡೆಯುವ ಸಭೆಗಳಲ್ಲಿ ಭಾಗವಹಿಸಿ ಭಾಷಣ ಮಾಡಬೇಕಿತ್ತು. ದೇವರಕದ್ರ ಅವರ ಮೊದಲ ಭೇಟಿಯಾಗಿತ್ತು. ಪರ್ಯಾಯ ಹೆಲಿಕಾಪ್ಟರ್ ವ್ಯವಸ್ಥೆಯಿಂದ ಪೂರ್ವನಿರ್ಧರಿತ ಎಲ್ಲ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳುತ್ತಿದ್ದು, ಪಕ್ಷದ ಮುಖಂಡರು ಕೂಡ ಸಕಲ ಸಿದ್ಧತೆಯಲ್ಲಿದ್ದಾರೆ.
ಸದ್ಯ ಗದ್ವಾಲ ಪಟ್ಟಣದಲ್ಲಿ ಜನಾಶೀರ್ವಾದ ಕಾರ್ಯಕ್ರಮ ನಡೆಯುತ್ತಿದ್ದು, 1 ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಶಾಸಕ ಬಂಡ್ಲ ಕೃಷ್ಣಮೋಹನ ರೆಡ್ಡಿ ತಿಳಿಸಿದ್ದಾರೆ. ಸಭಾಂಗಣ ಆವರಣದಲ್ಲಿ 50 ಸಾವಿರ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. 300 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ವಿಶೇಷ ಹೆಲಿಕಾಪ್ಟರ್ನಲ್ಲಿ ಆಗಮಿಸಲಿರುವ ಸಿಎಂ ಕೆಸಿಆರ್ಗಾಗಿ ಹೆಲಿಪ್ಯಾಡ್ ಸಿದ್ಧಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಅಧಿಕಾರಿಗಳು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಹೆಲಿಕಾಪ್ಟರ್ ತುರ್ತು ಭೂಸ್ಪರ್ಶದ ಬಳಿಕ ಮತ್ತೊಂದು ಹೆಲಿಕಾಪ್ಟರ್ ಮೂಲಕ ಮೆಹಬೂಬ್ನಗರ ಜಿಲ್ಲೆಯ ದೇವರಕದ್ರದಲ್ಲಿ ಆಯೋಜಿಸಿದ್ದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಕೆಸಿಆರ್, ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಸಹಜ. ಆದರೆ, ಮತದಾರರು ಅಭ್ಯರ್ಥಿಗಳ ವಿದ್ಯಾರ್ಹತೆಯನ್ನು ಪರಿಶೀಲಿಸಿ ಮತ ಚಲಾಯಿಸಬೇಕು. ಅಭ್ಯರ್ಥಿಯ ಹಿಂದೆ ಇರುವ ಪಕ್ಷಗಳ ಬಗ್ಗೆಯೂ ಯೋಚಿಸಬೇಕು. ಮತದಾರರು ಪ್ರಬುದ್ಧವಾಗಿ ಮತ ಚಲಾಯಿಸಿದರೆ ಮಾತ್ರ ಪ್ರಜಾಪ್ರಭುತ್ವ ಗೆಲ್ಲುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಮಿಜೋರಾಂ, ಛತ್ತೀಸ್ಗಢದ 20 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ, ನಾಳೆ ಮತದಾನ