ಪತ್ತನಂತಿಟ್ಟ, ಕೇರಳ: ವಿಶ್ವಪ್ರಸಿದ್ಧ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಈ ವರ್ಷದ ಮಕರ ಜ್ಯೋತಿ ದರ್ಶನಕ್ಕೆ ಸಿದ್ಧತೆ ನಡೆದಿದೆ. ಇಂದು ಮುಸ್ಸಂಜೆ ಮಕರ ಜ್ಯೋತಿ ದರ್ಶನ ಹಾಗೂ ಮಕರ ಸಂಕ್ರಮಣ ಪೂಜೆ ನಡೆಯಲಿದೆ. ಸೂರ್ಯ ಭಗವಂತನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಕಾಲಘಟ್ಟವೇ ಮಕರ ಸಂಕ್ರಮಣ ಎನ್ನುತ್ತಾರೆ. ತನ್ನಿಮಿತ್ತವಾಗಿ ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಜನವರಿ14ರ ರಾತ್ರಿ 8.45ಕ್ಕೆ ಮಕರ ಸಂಕ್ರಮಣ ಪೂಜೆ ನಡೆಯಲಿದೆ. ಇದಕ್ಕೂ ಮುನ್ನ ಮುಸ್ಸಂಜೆ 6.30ಕ್ಕೆ ದೀಪಾರಾಧನೆ ನಡೆಯಲಿದೆ. ಇದೇ ವೇಳೆ ದೂರದ ಪೊನ್ನಂಬಲ ಮೇಡಿನಲ್ಲಿ ಮಕರ ಜ್ಯೋತಿ ದರ್ಶನವಾಗುತ್ತದೆ. ಆಕಾಶದಲ್ಲಿ ನಕ್ಷತ್ರ ಗೋಚರಿಸುತ್ತದೆ. ಅಯ್ಯಪ್ಪನ ಗರ್ಭಗುಡಿ ಮೇಲೆ ಗರುಡ ಪ್ರದಕ್ಷಿಣೆ ನಡೆಯುತ್ತದೆ.
ಇಂದು ಲಕ್ಷಾಂತರ ಭಕ್ತರು ಕಾಯುತ್ತಿರುವ ಮಕರವಿಳಕ್ ಬಂದೇ ಬಿಟ್ಟಿದೆ. ಶಬರಿಮಲೆ ಸನ್ನಿಧಾನಂ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮಕರಜ್ಯೋತಿ ದರ್ಶನವಾಗಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಬೀಡು ಬಿಟ್ಟಿದ್ದಾರೆ. ತಿರುವಾಭರಣ ಮೆರವಣಿಗೆ ಸಂಜೆ 6.15ಕ್ಕೆ ಸನ್ನಿಧಾನಂ ತಲುಪಲಿದೆ. 6:30ಕ್ಕೆ ತಿರುವಾಭರಣ ಸಹಿತ ದೀಪಾರಾಧನೆ ನಡೆಯುತ್ತದೆ. ನಂತರ ಪೊನ್ನಂಪಲಮೇಡ್‌ನಲ್ಲಿ ಮಕರಜ್ಯೋತಿ ದರ್ಶನವಾಗುವುದು.
ಮಕರ ಸಂಕ್ರಮಣ ಪೂಜೆಗಾಗಿ ಅಯ್ಯಪ್ಪ ದೇವಾಲಯದಲ್ಲಿ ನಿನ್ನೆಯಿಂದಲೇ ತಯಾರಿ ನಡೆಯುತ್ತಿದೆ. ನಿನ್ನೆ ಶುದ್ಧಿಕ್ರಿಯೆಗಳು ನಡೆದವು. ಮೊನ್ನೆ ಪ್ರಸಾದ ಶುದ್ಧಿ ಕ್ರಿಯೆ ನಡೆಯಿತು. ಇಂದು ರಾತ್ರಿ ಮಕರ ಸಂಕ್ರಮಣ ಪೂಜೆ ಬಳಿಕ ಮಾಳಿಗಪುರತ್ತಮ್ಮ ದೇವರು ಅಯ್ಯಪ್ಪ ಸನ್ನಿಧಿಗೆ ಆಗಮಿಸಿವುದು ಸಂಪ್ರದಾಯ. ಜನವರಿ 15ರಿಂದ 19ರ ತನಕ ಮೆಟ್ಟಿಲ ಪೂಜೆ ನಡೆಯಲಿದೆ. 18ರಂದು ಭಸ್ಮಾಭಿಷೇಕ ಮತ್ತು 19ರಂದು ಗುರುಪೂಜೆ ನಡೆಯಲಿದೆ. ಜ.20ಕ್ಕೆ ಪಂದಳ ರಾಜ ಪ್ರತಿನಿಧಿ ಅಯ್ಯಪ್ಪ ದರ್ಶನ ಪಡೆದ ಬಳಿಕ ಜನವರಿ 20ರಂದು ದೇವಸ್ಥಾನದ ಬಾಗಿಲು ಮುಚ್ಚುತ್ತದೆ. ಭಕ್ತರು ಜ.19ರ ತನಕ ಮಾತ್ರವೇ ಅಯ್ಯಪ್ಪ ದರ್ಶನ ಪಡೆಯಬಹುದಾಗಿದೆ.
ಪಂದಳ ರಾಜನ ಅರಮನೆಯಿಂದ ಶ್ರೀ ಅಯ್ಯಪ್ಪನ ತಿರುವಾಭರಣ ಪೆಟ್ಟಿಗೆಯನ್ನು ಮೆರವಣಿಗೆ ಮೂಲಕ ಶಬರಿಮಲೆಗೆ ತರಿಸಿ, ಮಕರಜ್ಯೋತಿ ಉತ್ಸವದ ಸಂದರ್ಭದಲ್ಲಿ ಶ್ರೀ ಅಯ್ಯಪ್ಪನನ್ನು ಈ ಆಭರಣಗಳಿಂದ ಅಲಂಕರಿಸಿ ಪೂಜಿಸುವುದು ವಾಡಿಕೆ. ಇಂದು ಸಂಜೆ 6.30ರ ಸುಮಾರಿಗೆ ಇದು ನೆರವೇರಲಿದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಮಕರ ಸಂಕ್ರಾಂತಿಯಂದು ಅಯ್ಯಪ್ಪನಿಗೆ ಈ ತಿರುವಾಭರಣಗಳಿಂದ ಅಲಂಕರಿಸಲಾಗುತ್ತದೆ. ಪೂಜನೀಯವಾದ ಈ ಆಭರಣಗಳು ಪಂದಳ ರಾಜರು ತಮ್ಮ ವಂಶಸ್ಥನಾದ ಅಯ್ಯಪ್ಪನಿಗೆ ಪ್ರೀತಿಯಿಂದ ಮಾಡಿಸಿದ ಒಡವೆಗಳಾಗಿವೆ. ಇದನ್ನು ಸಂಕ್ರಾಂತಿಯಂದು ಅಯ್ಯಪ್ಪ ಸನ್ನಿಧಾನಕ್ಕೆ ತೆಗೆದುಕೊಂಡು ಹೋಗುವ ಹಾಗೂ ಅಲ್ಲಿಂದ ಮರಳಿ ಅರಮನೆಗೆ ಸೇರಿಸುವ ಜವಾಬ್ದಾರಿಯೂ ಈ ಪಂದಳ ಮನೆತನದವರದೇ ಆಗಿರುತ್ತದೆ. ಇರುಮುಡಿ ಇಲ್ಲದಿದ್ದರೂ ಹದಿನೆಂಟು ಮೆಟ್ಟಲನ್ನು ಹತ್ತುವ ಅವಕಾಶ ಪಂದಳ ರಾಜಮನೆತನಕ್ಕೆ ಮಾತ್ರ ಇರುವುದು ಗಮನಾರ್ಹ.
ಮೂರು ಆಭರಣಗಳ ಪೆಟ್ಟಿಗೆಯಲ್ಲಿ ಒಂದು ಅಯ್ಯಪ್ಪನ ಆಭರಣದ ಪೆಟ್ಟಿಗೆಯಾದರೆ ಇನ್ನೆರಡು ಪೆಟ್ಟಿಗೆಯಲ್ಲಿ ಮಾತೆಯ ಆಭರಣಗಳಿರುತ್ತದೆ. ಪಂದಳ ಅರಮನೆಯಲ್ಲಿ ಪೂಜೆಯು ನೆರವೇರಿಸಿದ ನಂತರ ಪಲ್ಲಕ್ಕಿಯಲ್ಲಿರಿಸಿ ಶಬರಿಗಿರಿಗೆ ಹೊತ್ತೊಯ್ಯಲಾಗುತ್ತದೆ. ಹೀಗೆ ಅಯ್ಯಪ್ಪನ ಆಭರಣಗಳನ್ನು ತೆಗೆದುಕೊಂಡು ಹೋಗುವವರೂ ಕೂಡಾ ಅಯ್ಯಪ್ಪ ದೀಕ್ಷೆ ತೆಗೆದುಕೊಳ್ಳುವುದು ಕಡ್ಡಾಯ. ಪಂದಳ ಅರಮನೆಯಿಂದ ಆಭರಣಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವಾಗ ಗರುಡವೂ ಕಾವಲು ಕಾಯುತ್ತದೆ ಎನ್ನುವ ನಂಬಿಕೆ ಇದೆ. ಚಿನ್ನದ ಆಭರಣಗಳಿಂದ ಅಯ್ಯಪ್ಪನ್ನು ಅಲಂಕರಿಸಿ ದ್ವಾರವನ್ನು ತೆರೆಯುವ ಸಮಯಕ್ಕೆ ಪೊನ್ನಂಬಲಮೇಡು ಗಿರಿಯಲ್ಲಿ ಮಕರ ಜ್ಯೋತಿಯೂ ಕಾಣಿಸಿಕೊಳ್ಳುತ್ತದೆ. ಈ ಮಕರ ಜ್ಯೋತಿಯು ಮೂರು ಬಾರಿ ಬೆಳಗುತ್ತದೆ. ಇದನ್ನೇ ಮಕರವಿಲಕ್ಕು ಎಂದು ಕರೆಯುತ್ತಾರೆ.
ಇಂದು ಬೆಳಗ್ಗೆ 10 ಗಂಟೆ ಬಳಿಕ ಪಂಪಾದಿಂದ ಶಬರಿಮಲೆ ಸನ್ನಿಧಿಗೆ ಯಾತ್ರಿಕರು ಬೆಟ್ಟ ಏರುವುದನ್ನು ನಿಷೇಧಿಸಲಾಗಿದೆ. ಆದರೆ, ಮಕರ ಜ್ಯೋತಿ ದರ್ಶನದ ಬಳಿಕ ಈ ನಿಷೇಧ, ನಿರ್ಬಂಧಗಳು ಸಡಿಲವಾಗಲಿವೆ. ಅಯ್ಯಪ್ಪ ಭಕ್ತರ ದಟ್ಟಣೆ ನಿಯಂತ್ರಿಸಿ, ಸುಗಮವಾಗಿ ಉತ್ಸವ ನಡೆಸುವುದಕ್ಕೆ ಈ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ದೇವಸ್ವಂ ಬೋರ್ಡ್ ಸದಸ್ಯರು ಮಾಹಿತಿ ನೀಡಿದ್ದಾರೆ.
ಓದಿ: ದೇಶಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ.. ಹಬ್ಬದ ಮಹತ್ವ, ಆಚರಣೆ ಹೀಗಿದೆ..