ತಿರುವನಂತಪುರಂ(ಕೇರಳ) : ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹಲವೆಡೆ ಭೂಕುಸಿತ ಸಂಭವಿಸಿದೆ. ಇಂದು ಸಂಜೆ ವೇಳೆಗೆ ಕೇರಳದ ಉತ್ತರ ಭಾಗದಲ್ಲಿ ವರುಣ ಮತ್ತಷ್ಟು ಆರ್ಭಟಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹಲವು ತಗ್ಗು ಪ್ರದೇಶಗಳಲ್ಲಿ ಪ್ರವಾಹದ ವರದಿಯಾಗಿದೆ. ಮನೆಯ ಗೋಡೆ ಕುಸಿದು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಅ.12ರಂದು ಮಲಪ್ಪುರಂನಲ್ಲಿ ಮನೆ ಗೋಡೆ ಕುಸಿದು ಇಬ್ಬರು ಮಕ್ಕಳು ಅಸುನೀಗಿದ್ದರು. ಥೆನ್ಮಲ ಅಣೆಕಟ್ಟಿನ ಗೇಟ್ಗಳನ್ನು ತೆರೆಯಲಾಗಿದೆ.
ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಎರ್ನಾಕುಲಂ, ಪತ್ತನಂತಿಟ್ಟ, ತ್ರಿಶೂರ್, ಇಡುಕ್ಕಿ ಮತ್ತು ಕೊಟ್ಟಾಯಂ- ಈ ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ವಯನಾಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ನದಿಯ ನೀರು ಅಪಾಯಮಟ್ಟ ಮೀರಿ ಹರಿಯುತ್ತಿದೆ. ಭಾರಿ ಮಳೆಯಿಂದಾಗಿ ಅನೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಹೀಗೆ ಮಳೆ ಮುಂದುವರೆದರೆ ರಾಜ್ಯದ ಇತರ ಡ್ಯಾಂಗಳ ಗೇಟ್ಗಳನ್ನು ತೆರೆಯಲಾಗುವುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕೇರಳದಲ್ಲಿ ಭಾರೀ ಮಳೆ: ಮನೆ ಗೋಡೆ ಕುಸಿದು ಇಬ್ಬರು ಮುದ್ದು ಮಕ್ಕಳು ಬಲಿ
ಹೆಣ್ಣು ಮಗುವಿನ ಮೃತದೇಹ ಪತ್ತೆ
ಇಡುಕ್ಕಿ ಜಿಲ್ಲೆಯ ತೋಡುಪುಳದಲ್ಲಿ ಪ್ರವಾಹದ ನೀರಿನಲ್ಲಿ ಕಾರೊಂದು ಕೊಚ್ಚಿಹೋಗಿದ್ದು, ಕಾರಿನೊಳಗೆ ಹೆಣ್ಣು ಮಗುವೊಂದು ಶವವಾಗಿ ಪತ್ತೆಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ.
ಚಲಿಸುತ್ತಿದ್ದ ಬಸ್ ಜಲಾವೃತ
ಕೊಟ್ಟಾಯಂ ಜಿಲ್ಲೆಯ ಕೂಟ್ಟಿಕಲ್ನಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, 13 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಭೂಕುಸಿತದಲ್ಲಿ ಮೂರು ಮನೆಗಳು ಸಂಪೂರ್ಣ ನಾಶವಾಗಿದೆ. ಪ್ರಯಾಣಿಕರನ್ನು ಹೊತ್ತು ಚಲಿಸುತ್ತಿದ್ದ ಬಸ್ವೊಂದು ಪ್ರವಾಹದ ನೀರಿನಲ್ಲಿ ಸಿಲುಕಿದ್ದ, ಪ್ರಯಾಣಿಕರನ್ನು ಸ್ಥಳಾಂತರಿಸಲು ಹರಸಾಹಸ ಪಡಲಾಗಿದೆ.