ನವದೆಹಲಿ: ಬೆಳಗ್ಗೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದೆಹಲಿಯ ಪ್ರಮುಖ ರಸ್ತೆಗಳು ನದಿಗಳಂತಾಗಿವೆ. ಧೌಲಾ ಕುವಾನ್, ಮಥುರಾ ರಸ್ತೆ, ಮೋತಿ ಬಾಗ್, ವಿಕಾಸ್ ಮಾರ್ಗ, ರಿಂಗ್ ರಸ್ತೆ, ರೋಹ್ಟಕ್ ರಸ್ತೆ, ಸಂಗಮ್ ವಿಹಾರ್, ಕಿರಾರಿ ಮತ್ತು ಪ್ರಗತಿ ಮೈದಾನದ ಸಮೀಪ ಇರುವ ಕೆಲವು ಪ್ರದೇಶಗಳು ಈಗ ನದಿಯಂತಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, 16 ದಿನ ತಡವಾಗಿ ಅಂದರೆ ನೈಋತ್ಯ ಮಾನ್ಸೂನ್ ಜುಲೈ 13 ರಂದು ರಾಜಧಾನಿಯನ್ನು ತಲುಪಿದೆ. ಸಾಮಾನ್ಯವಾಗಿ, ಪ್ರತಿ ವರ್ಷ ಮಾನ್ಸೂನ್ ಜೂನ್ 27 ರ ವೇಳೆಗೆ ದೆಹಲಿ ತಲುಪುತ್ತದೆ. ಈ ಬಾರಿ 16 ದಿನಗಳು ತಡವಾಗಿದೆ.
ಮಾನ್ಸೂನ್ ಜುಲೈ 8 ರ ವೇಳೆಗೆ ಇಡೀ ದೇಶವನ್ನು ಆವರಿಸಿತು. ಕಳೆದ ವರ್ಷ ಮುಂಗಾರು ಜೂನ್ 25 ರಂದು ದೆಹಲಿ ತಲುಪಿ, ಜೂನ್ 29 ರ ವೇಳೆಗೆ ಇಡೀ ದೇಶವನ್ನು ಆವರಿಸಿತ್ತು ಎಂದು ಐಎಂಡಿ ಮಂಗಳವಾರ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ ಸಫ್ದರ್ಜಂಗ್ ವೀಕ್ಷಣಾಲಯದಲ್ಲಿನ ಮಳೆ ಮಾಪಕದಲ್ಲಿ 100 ಮಿ.ಮೀ ದಾಖಲಾಗಿದ್ದು, ದೆಹಲಿಯಲ್ಲಿ ಗುಡುಗು ಸಹಿತ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.