ಮುಂಬೈ: ಮಹಾರಾಷ್ಟ್ರದಲ್ಲಿ ಮುಂಗಾರು ಮಳೆ ಅಬ್ಬರ ಶುರುವಾಗಿದೆ. ಕಳೆದ 12 ಗಂಟೆ ಅವಧಿಯಲ್ಲಿ 95.81 ಮಿಮೀ ಮಳೆಯಾಗಿದ್ದು, ಬಡಾವಣೆಗಳು, ರಸ್ತೆಗಳೆಲ್ಲಾ ನೀರು ತುಂಬಿಕೊಂಡಿದೆ. ಮಳೆಯಿಂದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಸಂಚಾರಕ್ಕೆ ತೊಂದರೆಯುಂಟಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ರತ್ನಗಿರಿ ಜಿಲ್ಲೆಯಲ್ಲಿ ಸೋಮವಾರ ಧಾರಾಕಾರ ಮಳೆ ಸುರಿದಿದೆ. ಚಿಪ್ಲುನ್ ಪಟ್ಟಣದ ಡಿಬಿಜೆ ಕಾಲೇಜು ಹಾಗೂ ಕಪ್ಸಾಲ್‌ನಲ್ಲಿ ಜಲಾವೃತಗೊಂಡಿವೆ. ಒಂದರಿಂದ ಒಂದೂವರೆ ಅಡಿ ನೀರು ನಿಂತುಕೊಂಡಿದ್ದು, ವಾಹನಗಳ ಸಂಚಾರ ಸ್ಥಗಿತವಾಗಿದೆ.
ನದಿಗಳ ಒಳಹರಿವು ಹೆಚ್ಚಳ: ಮಳೆಯಿಂದಾಗಿ ನದಿಗಳ ಒಳಹರಿವು ದಿಢೀರ್ ಏರಿಕೆಯಾಗಿದೆ. ನದಿನೀರು ಹೊರಬಿಡಲಾಗಿದ್ದು, ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಇದರಿಂದ ಪ್ರವಾಹ ಉಂಟಾಗಿದ್ದು, ನದಿಪಾತ್ರದ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ.
ರಾಜಾಪುರ ತಾಲೂಕಿನ ಅರ್ಜುನ ಮತ್ತು ಕೊಡವಳ್ಳಿ ನದಿಗಳು ಅಪಾಯದ ಮಟ್ಟವನ್ನು ದಾಟಿವೆ. ರಾಜಾಪುರ ನಗರ ಜಲಾವೃತಗೊಂಡಿದೆ. ಜವಾಹರ್ ಚೌಕ್‌ಗೆ ಪ್ರವಾಹ ಬಂದಿರುವುದು ಇದೇ ಮೊದಲು. ಗಂಟೆಗೊಮ್ಮೆ ಪ್ರವಾಹದ ನೀರು ಹೆಚ್ಚುತ್ತಿದ್ದು, ಅಲ್ಲಿನ ಜನರು ಪರದಾಡುವಂತಾಗಿದೆ.
ಜಮದಾ ನದಿಯಲ್ಲಿ ನೀರು ಹೆಚ್ಚಾಗಿದೆ. ಪ್ರವಾಹ ಉಂಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ದಡದಲ್ಲಿರುವ ಕೆಲವು ಮನೆಗಳು ಮತ್ತು ಅಂಗಡಿಗಳ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಜನರು ಜಾಗೃತರಾಗಿರಲು ಸ್ಥಳೀಯ ಆಡಳಿತ ಸೂಚಿಸಿದೆ.
ಇದನ್ನೂ ಓದಿ: ಮಳೆಯೋ ಮಳೆ: ಇಂದು ದ.ಕ, ಉ.ಕ ಜಿಲ್ಲೆಗಳ ಶಾಲಾ, ಕಾಲೇಜುಗಳಿಗೆ ರಜೆ