ಜೈಪುರ/ಜೋಧ್‌ಪುರ: ಭಾರಿ ಮಳೆಯಿಂದ ರಾಜಸ್ಥಾನದ ಜೋಧ್‌ಪುರ, ಭಿಲ್ವಾರಾ ಮತ್ತು ಚಿತ್ತೋರ್‌ಗಢ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳು ಮತ್ತು ರೈಲು ಹಳಿಗಳು ಜಲಾವೃತವಾಗಿದ್ದು, ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಜೋಧ್‌ಪುರದಲ್ಲಿ ಮಳೆ ನೀರಿನಿಂದ ತುಂಬಿದ್ದ ಹೊಂಡದಲ್ಲಿ ನಾಲ್ವರು ಮಕ್ಕಳು ಮುಳುಗಿ ಸಾವನ್ನಪ್ಪಿದ ದುರ್ಘಟನೆಯೂ ವರದಿಯಾಗಿದೆ.
ಮಂಗಳವಾರ ಒಂದೇ ದಿನ 24 ಗಂಟೆಗಳ ಅವಧಿಯಲ್ಲಿ 21 ಸೆಂ.ಮೀ ಭಾರಿ ಮಳೆಯಾಗಿದೆ. ಇದು ಪ್ರವಾಹ ಪರಿಸ್ಥಿತಿ ಉಂಟಾಗಲು ಕಾರಣವಾಗಿದೆ. ಪ್ರತಿಕೂಲ ಹವಾಮಾನ ಮತ್ತು ಪ್ರವಾಹದಿಂದಾಗಿ ಉತ್ತರ ಪಶ್ಚಿಮ ರೈಲ್ವೆಯ ಏಳು ರೈಲುಗಳನ್ನು ರದ್ದುಗೊಳಿಸಲಾಗಿದೆ. ಆರು ರೈಲುಗಳನ್ನು ಭಾಗಶಃ ರದ್ದುಗೊಳಿಸಿದ್ದು, ಇನ್ನೆರಡು ರೈಲುಗಳನ್ನು ರಾಜಸ್ಥಾನದಿಂದ ವಾಪಸ್ ಕಳುಹಿಸಲಾಗಿದೆ. ಈ ಜಿಲ್ಲೆಗಳ ಹಲವು ಪ್ರದೇಶಗಳು ಜಲಾವೃತವಾಗಿದ್ದು, ವಾಹನಗಳು ಮಳೆ ನೀರಿನಲ್ಲಿ ಕೊಚ್ಚಿ ಹೋದ ಬಗ್ಗೆಯೂ ವರದಿಯಾಗಿದೆ.
ಹೊಂಡದಲ್ಲಿ ಮಕ್ಕಳ ದುರ್ಮರಣ: ಜೋಧ್‌ಪುರದಲ್ಲಿ ಮಳೆ ನೀರಿನಿಂದ ತುಂಬಿದ ಹೊಂಡದಲ್ಲಿ ಬಾಲಕಿ ಸೇರಿದಂತೆ ನಾಲ್ವರು ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ. ಎಲ್ಲರೂ ಹೊಂಡದಲ್ಲಿ ಸ್ನಾನ ಮಾಡುತ್ತಿದ್ದಾಗ ಅದರಲ್ಲಿ ನಾಲ್ವರು ಆಳ ಪ್ರದೇಶದಲ್ಲಿ ಮುಳುಗಿದ್ದಾರೆ. ಅದೃಷ್ಟವಶಾತ್ ಓರ್ವ ಬಾಲಕ ಬಚಾವಾಗಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿದರೂ ಅಷ್ಟೊತ್ತಿಗಾಗಲೇ ನಾಲ್ವರು ಅಸುನೀಗಿದ್ದರು.
ಘಟನೆಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಭಿಲ್ವಾರಾದಲ್ಲಿ ಕಟ್ಟಡದ ಒಂದು ಭಾಗ ಕುಸಿದು ಅವಶೇಷಗಳಡಿಯಲ್ಲಿ ಮಹಿಳೆಯೋರ್ವಳು ಸಿಲುಕಿದ್ದಳು. ರಾಜ್ಯ ವಿಪತ್ತು ನಿರ್ವಹಣಾ ತಂಡ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದ್ದು, ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹವಾಮಾನ ಇಲಾಖೆ ಎಚ್ಚರಿಕೆ: ಮುಂದಿನ 48 ಗಂಟೆಗಳ ಅವಧಿಯಲ್ಲಿ ಪೂರ್ವ ರಾಜಸ್ಥಾನದಲ್ಲಿ ಜೋರು ಮಳೆಯಾಗಲಿದೆ. ಅಜ್ಮೀರ್, ಜೋಧ್‌ಪುರ ಮತ್ತು ಉದಯ್‌ಪುರ ಜಿಲ್ಲೆಗಳಲ್ಲಿ ಇದರ ಪರಿಣಾಮ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಗುಹಾ ದೇವಾಲಯದ ಸುತ್ತಮುತ್ತ ಹೆಚ್ಚು ಮಳೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ