ಜೋಶಿಮಠ- ನವದೆಹಲಿ: ಜೋಶಿಮಠ ಭೂಕುಸಿತ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪ್ರಕರಣ ಸಂಬಂಧ ಉತ್ತರಾಖಂಡ ಹೈಕೋರ್ಟ್‌ನ ಮೊರೆ ಹೋಗುವಂತೆ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಜೋಶಿ ಮಠದ ಭೂ ಕುಸಿತ ಪ್ರಕರಣವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಜ್ಯೋತಿಷಪೀಠದ ಜಗದ್ಗುರು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿಯವರು ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಬಗೆಗಿನ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಡಿವೈ ಚಂದ್ರಚೂಡ್, ನ್ಯಾ.ಪಿ.ಎಸ್.ನರಸಿಂಹ ಮತ್ತು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರ ಪೀಠ ಈ ಆದೇಶವನ್ನು ನೀಡಿದೆ. ಇನ್ನು ಪ್ರಕರಣದ ವಿಚಾರಣೆ ಉತ್ತರಾಖಂಡ್ ಹೈಕೋರ್ಟ್ನಲ್ಲಿ ನಡೆಯುತ್ತಿದೆ. ಮೊದಲು ಅಲ್ಲಿ ವಿಚಾರಣೆ ನಡೆಸಲು ಅವಕಾಶ ನೀಡಬೇಕೆಂದು ಇದೇ ವೇಳೆ ಹೇಳಿದೆ.
ಸುಪ್ರೀಂಕೋರ್ಟ್ನ ಮಧ್ಯಸ್ಥಿಕೆ ಕೋರಿ ಸಲ್ಲಿಸಲಾದ ಮನವಿಯನ್ನು ಉತ್ತರಾಖಂಡ ಹೈಕೋರ್ಟ್ ಗಮನಿಸಿದೆಯೇ ಎಂದು ಸಿಜೆಐ ಡಿವೈ ಚಂದ್ರಚೂಡ್ ಕೇಳಿದರು. ಯಾವುದೇ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ನಂತರ ಈ ಪ್ರಕರಣಗಳನ್ನು ಯಾವುದೇ ಹೈಕೋರ್ಟ್ ಮತ್ತೆ ಪರಿಶೀಲಿಸಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಮನವಿ ಹೈಕೋರ್ಟ್ ಗಮನಕ್ಕೆ ಬಂದಿರುವ ಬಗ್ಗೆ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸುವಂತೆ ಆದೇಶಿಸಿದರು.
ಪ್ರಕರಣ ತುರ್ತು ವಿಚಾರಣೆಯನ್ನು ನಿರಾಕರಿಸಿದ್ದ ಸುಪ್ರೀಂ: ಇನ್ನು ಈ ಹಿಂದೆ ಪ್ರಕರಣದ ತುರ್ತು ವಿಚಾರಣೆಯನ್ನು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ಇಂತಹ ವಿಷಯಗಳನ್ನು ಪರಿಶೀಲಿಸಲು ಪ್ರಜಾಸತ್ತಾತ್ಮಕ ಚುನಾಯಿತ ಸಂಸ್ಥೆಗಳಿವೆ. ಅಲ್ಲಿ ಪ್ರಕರಣಗಳ ಇತ್ಯರ್ಥ ನಡೆಸಬೇಕು. ಎಲ್ಲ ಪ್ರಕರಣಗಳನ್ನು ಸುಪ್ರೀಂಕೋರ್ಟ್ಗೆ ತರಬಾರದು ಎಂದು ಹೇಳಿತ್ತು.
ಜೋಶಿ ಮಠದ ಕುಸಿತಕ್ಕೆ ಕೈಗಾರಿಕೀಕರಣ ಕಾರಣ : ಅರ್ಜಿದಾರ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಜೋಶಿ ಮಠದ ಭೂ ಕುಸಿತಕ್ಕೆ ದೊಡ್ಡ ಪ್ರಮಾಣದ ಕೈಗಾರಿಕೀಕರಣ ಕಾರಣವಾಗಿದೆ. ಆದ್ದರಿಂದ ಉತ್ತರಾಖಂಡದ ನಿವಾಸಿಗಳಿಗೆ ತಕ್ಷಣದ ಆರ್ಥಿಕ ನೆರವು ಮತ್ತು ಪರಿಹಾರವನ್ನು ನೀಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದರು. ಜೊತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ (ಎನ್‌ಡಿಆರ್‌ಎ) ಸಹಕಾರ ಕೇಳಿದ್ದರು.
ಉತ್ತರಾಖಂಡ್ನ ಪ್ರಸಿದ್ಧ ಯಾತ್ರಾ ಸ್ಥಳ: ಜೋಶಿಮಠವು ಉತ್ತರಾಖಂಡದ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಜೋಶಿ ಮಠವು ಬದರೀನಾಥ್ ಮತ್ತು ಹೇಮಕುಂಡ್ ಮುಂತಾದ ಪ್ರಸಿದ್ಧ ಯಾತ್ರಾಸ್ಥಳಗಳ ಪ್ರಮುಖ ಹೆಬ್ಬಾಗಿಲು. ಸದ್ಯ ಇಲ್ಲಿನ ರಸ್ತೆಗಳು, ಮನೆಗಳ ಗೋಡೆಗಳ ಮೇಲೆ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದೆ. ಇಡೀ ನಗರ ನಿಧಾನವಾಗಿ ಕುಸಿಯುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ. ಮನೆಗಳು, ರಸ್ತೆಗಳು ಮತ್ತು ಹೊಲಗಳಲ್ಲಿ ಭಾರಿ ಬಿರುಕುಗಳು ಕಾಣಿಸಿಕೊಳ್ಳುತ್ತಿದ್ದು, ಭೂ ಕುಸಿತ ಮುಂದುವರೆದು ಹಲವು ಮನೆಗಳು ಕುಸಿದಿವೆ ಎಂದು ತಿಳಿದು ಬಂದಿದೆ.
800ಕ್ಕೂ ಹೆಚ್ಚು ಕಟ್ಟಡಗಳಲ್ಲಿ ಬಿರುಕು: ಜೋಶಿಮಠ ಭೂಕುಸಿತಕ್ಕೆ ಸಂಬಂಧಿಸಿದಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಬುಲೆಟಿನ್ ಹೊರಡಿಸಿತ್ತು. ಇದರ ಪ್ರಕಾರ ಜೋಶಿಮಠದಲ್ಲಿನ ಹಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಒಟ್ಟು 826 ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಪೈಕಿ 165 ಮನೆಗಳು ಅಸುರಕ್ಷಿತ ಪ್ರದೇಶದಲ್ಲಿವೆ ಎಂದು ಹೇಳಿದೆ. ಇದುವರೆಗೆ ಇಲ್ಲಿನ ಸುಮಾರು 233 ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಜೋಶಿಮಠದ ಔಲಿ ರೋಪ್‌ವೇ ಬಳಿ ವ್ಯಾಪಕ ಬಿರುಕುಗಳು ಕಂಡುಬಂದಿದೆ ಎಂದು ಹೇಳಲಾಗಿದೆ. ಸದ್ಯ ಇಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ : ಜೋಶಿಮಠ ಭೂಕುಸಿತ: ಹಳಿ ತಪ್ಪಿದ ಜನಜೀವನ, ಮದುವೆ ಮಾಡಲೂ ಹಿಂದೇಟು..!