ಹೈದರಾಬಾದ್: ತೆಲುಗು ಖ್ಯಾತ ನಟ ಹಾಗೂ ಬಿಗ್ ಬಾಸ್ ತೆಲುಗು ಸೀಸನ್ 1ರ ಸ್ಪರ್ಧಿಯಾಗಿಯಾಗಿದ್ದ ಕತ್ತಿ ಮಹೇಶ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ನೆಲ್ಲೂರಿನ ಹೊರ ವಲಯದ ಚಂದ್ರಶೇಖರಪುರಂ ಬಳಿ ಮಹೇಶ್ ಚಲಿಸುತ್ತಿದ್ದ ಕಾರು ಶುಕ್ರವಾರ (ನಿನ್ನೆ) ಅಪಘಾತಕ್ಕೀಡಾಗಿದೆ.. ಸರಿಯಾದ ಸಮಯಕ್ಕೆ ಕಾರಿನ ಏರ್ಬ್ಯಾಗ್ ತೆರೆದುಕೊಂಡಿದ್ದರಿಂದ ಅವರಿಗೆ ಮಾರಣಾಂತಿಕ ಗಾಯಗಳಾಗುವುದು ತಪ್ಪಿದೆ ಎನ್ನಲಾಗಿದೆ. ಆದರೂ ಅವರಿಗೆ ಸದ್ಯಕ್ಕೆ ಪ್ರಜ್ಞೆ ಬಂದಿಲ್ಲ ಎಂದು ತಿಳಿದು ಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಮಹೇಶ್ ಅವರ ಇನೊವಾ ಕಾರು ಜಖಂ ಆಗಿದೆ. ಸದ್ಯ ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
2016 ರಲ್ಲಿ ಕಿರುಚಿತ್ರಗಳ ಮೂಲಕ ಮಹೇಶ್ ವೃತ್ತಿಜೀವನ ಆರಂಭಿಸಿದ್ದರು. ಸಿನಿಮಾ ವಿಮರ್ಶೆಯಲ್ಲಿ ವಿವಾದಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಮಹೇಶ್ ಹೆಚ್ಚು ಖ್ಯಾತಿ ಪಡೆದುಕೊಂಡರು. ನೇನೆ ರಾಜು ನೇನೆ ಮಂತ್ರಿ, ಕ್ರ್ಯಾಕ್, ಅಮ್ಮ ರಾಜ್ಯಂ ಲೋ ಕಡಪ ಬಿದ್ದಲು ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಮಹೇಶ್ ಆರೋಗ್ಯದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಆಸ್ಪತ್ರೆ ಬಿಡುಗಡೆ ಮಾಡಲಿರುವ ಹೆಲ್ತ್ ಬುಲೆಟಿನ್ಗಾಗಿ ನಿರೀಕ್ಷಿಸಲಾಗುತ್ತಿದೆ.