ಮಹಬೂಬಾಬಾದ್ (ತೆಲಂಗಾಣ): ತಾವು ಕೆಲಸ ಮಾಡುತ್ತಿರುವ ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾವಣೆಗೊಂಡ ಮುಖ್ಯಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಬಾನೋತ್ ಜೆತ್ರಾ (57) ಅವರು ಮಹಬೂಬಾಬಾದ್ ಜಿಲ್ಲೆಯ ನೆಲ್ಲಿಕುದುರು ಮಂಡಲದ ಚಿನ್ನ ಮುಪ್ಪರಂ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಇತ್ತೀಚೆಗೆ ಇವರನ್ನು ಮುಲುಗು ಜಿಲ್ಲೆಯ ಶಾಲೆಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿತ್ತು. ಅಂದಿನಿಂದ ಪ್ರತಿದಿನ ದೂರದ ಊರಿಗೆ ಹೋಗುವುದು ಹೇಗೆ ಎಂದು ಅದರ ಬಗ್ಗೆಯೇ ಯೋಚಿಸುತ್ತಿದ್ದ ಬಾನೋತ್ ಅವರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಿನ್ನೆ ಹೃದಯಾಘಾತವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಕಲಬುರ್ಗಿ: ಲವ್ ಜಿಹಾದ್ ವಿರುದ್ಧ ಮಾತನಾಡಿದ ಶ್ರೀಗಳ ಮಠದ ಮೇಲೆ ಕಲ್ಲು ತೂರಾಟ
ಕೋಮಾ ಸ್ಥಿತಿಯಲ್ಲಿದ್ದ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು. ನಮ್ಮ ತಾಯಿ ಅಂಗನವಾಡಿ ಶಿಕ್ಷಕಿ. ಗಂಡ-ಹೆಂಡತಿಗೆ ಇಬ್ಬರಿಗೂ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶವನ್ನು ಕಿತ್ತೊಗೆಯಬೇಡಿ ಎಂದು ಬಾನೋತ್ ಬೇಡಿಕೊಂಡಿದ್ದರಂತೆ. ಅಷ್ಟೇ ಅಲ್ಲ ತಾವೂ ಪಾರ್ಶ್ವವಾಯು ರೋಗದಿಂದ ಬಳಲುತ್ತಿರುವುದಾಗಿ ತಿಳಿಸಿದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಬಾನೋತ್ ಅವರ ಪುತ್ರ ಗೋಪಾಲ್ ಅಳಲು ತೋಡಿಕೊಂಡಿದ್ದಾರೆ.
ಬಾನೋತ್ ಜೆತ್ರಾ ಸಾವಿಗೆ ಸರ್ಕಾರವೇ ಹೊಣೆ ಹೊರಬೇಕು. ಸುಮಾರು 30 ವರ್ಷಗಳ ಕಾಲ ಒಂದೇ ಜಿಲ್ಲೆಯಲ್ಲಿಯೇ ಸೇವೆ ಸಲ್ಲಿಸಿ ಬೇರೆ ಜಿಲ್ಲೆಗೆ ಹೋಗಬೇಕೆನ್ನುವ ವೇದನೆಯಿಂದ ಅವರು ತೀರಿಕೊಂಡರು ಎಂದು ಶಿಕ್ಷಕರ ಸಂಘದ ಹೋರಾಟ ಸಮಿತಿ ಹೇಳಿದೆ.