ನವದೆಹಲಿ: ಪೆಗಾಸಸ್ ಸ್ಪೈವೇರ್ ಸಾಫ್ಟ್‌ವೇರ್ ಮೂಲಕ ದೇಶದ ಗಣ್ಯರ ಫೋನ್ ಹ್ಯಾಕಿಂಗ್ (ಗೂಢಚರ್ಯೆ) ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಕೂಡ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿಂದು ವಿರೋಧ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸರ್ಕಾರವು ಇಸ್ರೇಲ್‌ನ ಸಾಫ್ಟ್‌ವೇರ್ ಪೆಗಾಸಸ್ ಅನ್ನು ಖರೀದಿಸಿದೆಯೇ ಎಂದು ತಿಳಿಯಲು ಬಯಸುತ್ತೇವೆ ಎಂದರು. ಭದ್ರತಾ ಉದ್ದೇಶಗಳಿಗಾಗಿ ಮಾತ್ರ ಸ್ಪೈವೇರ್ ಅನ್ನು ಸರ್ಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಲಾಗುತ್ತದೆ ಎಂದು ಅದರ ಮೂಲ ಸಂಸ್ಥೆ ಹೇಳುತ್ತದೆ. ನಾವು ಕೇವಲ ಒಂದು ಪ್ರಶ್ನೆ ಕೇಳಲು ಬಯಸುತ್ತೇವೆ. ಭಾರತ ಸರ್ಕಾರ ಪೆಗಾಸಸ್ ಖರೀದಿಸಿದೆ? ಹೌದು ಅಥವಾ ಇಲ್ಲ ಎಂದು ಸರ್ಕಾರ ಉತ್ತರಿಸಲಿ. ಸರ್ಕಾರ ತನ್ನದೇ ಜನರ ವಿರುದ್ಧ ಪೆಗಾಸಸ್ ಆಯುಧವನ್ನು ಬಳಸಿದೆಯೇ? ಸದನದಲ್ಲಿ ಪೆಗಾಸಸ್ ಕುರಿತು ಯಾವುದೇ ಚರ್ಚೆ ನಡೆಯುವುದಿಲ್ಲ ಎಂದು ಸರ್ಕಾರ ನಮಗೆ ಸ್ಪಷ್ಟವಾಗಿ ತಿಳಿಸಿದೆ ಹೇಳಿದ್ದಾರೆ.
ಇಂದು ಇಡೀ ಪ್ರತಿಪಕ್ಷಗಳು ಸಂಸತಿನ ಹೊರಗೆ ಬಂದು ನಿಂತಿವೆ. ಸಂಸತ್ತಿನಲ್ಲಿ ನಮ್ಮ ಧ್ವನಿಯನ್ನು ನಿಗ್ರಹಿಸಲಾಗುತ್ತಿದ್ದು ನಾವು ಈ ರೀತಿ ಪ್ರತಿಭಟಿಸಬೇಕಿದೆ ಎಂದು ರಾಹುಲ್ ಹೇಳಿದರು.
ಇದನ್ನೂ ಓದಿ: ಲೋಕಸಭೆಯಲ್ಲಿ 'ಪೆಗಾಸಸ್' ಗದ್ದಲದ ನಡುವೆಯೇ 2 ಮಸೂದೆಗಳು ಅಂಗೀಕಾರ
ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್, ಕೇಂದ್ರವು ಸ್ಪೈವೇರ್ ಅನ್ನು ಬಳಸಿದೆ. ಅದು ಭಯೋತ್ಪಾದಕರ ಮೇಲೆ ಕಣ್ಣಿಡಲು ಬಳಸಬೇಕಿರುವುದು. ಇದೀಗ ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳ ವಿರುದ್ಧ ಬಳಸಲಾಗುತ್ತಿದೆ. ಪೆಗಾಸಸ್‌ನ ಸಮಸ್ಯೆಗಳು ರಾಷ್ಟ್ರೀಯತೆ ಮತ್ತು ದೇಶದ್ರೋಹಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ಹೇಳಿದರು.
ಈ ಆಯುಧವನ್ನು ಪ್ರಜಾಪ್ರಭುತ್ವದ ವಿರುದ್ಧ ಬಳಸಲಾಗಿದೆ. ನನಗೆ ಇದು ಗೌಪ್ಯತೆಯ ವಿಷಯವಲ್ಲ. ನಾನು ಇದನ್ನು ರಾಷ್ಟ್ರ ವಿರೋಧಿ ಕೃತ್ಯವೆಂದು ನೋಡುತ್ತೇನೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಭಾರತದ ಪ್ರಜಾಪ್ರಭುತ್ವದ ಆತ್ಮದ ಮೇಲೆ ದಾಳಿ ಮಾಡಿದ್ದಾರೆ ಎಂದು ರಾಹುಲ್ ರಾಹುಲ್ ಆರೋಪಿಸಿದರು.
ಶಿವಸೇನೆ ಸಂಸದ ಸಂಜಯ್ ರಾವತ್, ರಾಷ್ಟ್ರೀಯ ಭದ್ರತೆ ಮತ್ತು ಕೃಷಿ ಕಾನೂನುಗಳ ವಿಷಯದಲ್ಲಿ ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟಾಗಿವೆ ಎಂದು ಹೇಳಿದರು.