ಚಂಡೀಗಢ : ಹರಿಯಾಣದ ಸಚಿವ ಸಂದೀಪ್ ಸಿಂಗ್ ಅವರು ಮಹಿಳಾ ತರಬೇತುದಾರೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಸಂಬಂಧ ಇಂದು ಚಂಡೀಗಢ ಜಿಲ್ಲಾ ನ್ಯಾಯಾಲಯಕ್ಕೆ ಸಂತ್ರಸ್ತೆ ಪರ ವಕೀಲರು ಐದು ಅರ್ಜಿಗಳನ್ನು ಸಲ್ಲಿಸಿದರು. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಜಿಲ್ಲಾ ನ್ಯಾಯಾಲಯದಲ್ಲಿ ಸಂತ್ರಸ್ತೆ ಪರ ವಕೀಲರಾದ ಸುನೀಲ್ ಸೇಥಿ ಮತ್ತು ದೀಪಾಂಶು ಬನ್ಸಾಲ್ ಅವರು ವಾದ ಮಂಡಿಸುತ್ತಿದ್ದಾರೆ.
ನ್ಯಾಯಾಲಯಕ್ಕೆ ಸಲ್ಲಿಸಿರುವ ಮೊದಲ ಅರ್ಜಿಯಲ್ಲಿ, ಸಿಆರ್ಪಿಸಿ ಕಾಯ್ದೆ 209ರ ಅಡಿಯಲ್ಲಿ ಪ್ರಸ್ತುತ ವಿಚಾರಣೆ ನಡೆಸುತ್ತಿರುವ ಪ್ರಕರಣವನ್ನು ಸೆಷನ್ಸ್ ನ್ಯಾಯಾಲಯಕ್ಕೆ ಹಸ್ತಾಂತರಿಸುವಂತೆ ಕೋರಿದ್ದಾರೆ. ಪೊಲೀಸರು ಮತ್ತು ನ್ಯಾಯಾಲಯದ ಮುಂದೆ ಸಂತ್ರಸ್ತೆ ನೀಡಿರುವ ಹೇಳಿಕೆಯ ಪ್ರಕಾರ, ಇದು ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ. ಇಂತಹ ಪ್ರಕರಣಗಳನ್ನು ಸೆಷನ್ಸ್ ನ್ಯಾಯಾಲಯವು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸುತ್ತದೆ ಎಂದು ಹೇಳಿದರು.
ಎರಡನೇ ಅರ್ಜಿಯಲ್ಲಿ, ಸಿಆರ್ಪಿಸಿ ಕಾಯ್ದೆ 157ರ ಅಡಿಯಲ್ಲಿ ಚಂಡೀಗಢ ಪೊಲೀಸರು ಸೂಚನೆ ನೀಡುವಂತೆ ಕೋರಲಾಗಿದೆ. ಲೈಂಗಿಕ ಪ್ರಕರಣದ ತನಿಖಾಧಿಕಾರಿಯು ಸಿಆರ್ಪಿಸಿ ಕಾಯ್ದೆ 173 ಅನ್ವಯ ಪ್ರಕರಣದ ಕುರಿತ ಸಂಪೂರ್ಣ ದಾಖಲೆಯೊಂದಿಗೆ ಅಂತಿಮ ವರದಿಯ ಪ್ರತಿಯನ್ನು ನೀಡುವಂತೆ ಕೋರಲಾಗಿದೆ. ಮೂರನೇ ಅರ್ಜಿಯಲ್ಲಿ, ಸಿಆರ್ಪಿಸಿ ಕಾಯ್ದೆ 437(3)ಅಡಿಯಲ್ಲಿ ಆರೋಪಿತರಿಗೆ ನೀಡಲಾದ ನಿರೀಕ್ಷಣಾ ಜಾಮೀನಿಗೆ ಷರತ್ತುಗಳನ್ನು ವಿಧಿಸುವಂತೆ ಕೋರಲಾಗಿದೆ. ಸೆಪ್ಟೆಂಬರ್ 15ರಂದು ಚಂಡೀಗಢ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ರಾಜೀವ್ ಕೆ ಅವರು ಆರೋಪಿ ಸಂದೀಪ್ ಸಿಂಗ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ್ದಾರೆ. ಈ ಜಾಮೀನಿಗೆ ಹಲವು ಷರತ್ತುಗಳನ್ನು ವಿಧಿಸುವಂತೆ ಕೋರಿದ್ದಾರೆ.
ನಾಲ್ಕನೇ ಅರ್ಜಿಯಲ್ಲಿ, ಸುಪ್ರೀಂ ಕೋರ್ಟ್ ಮತ್ತು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನಿರ್ದೇಶನಗಳ ಪ್ರಕಾರ, ಪ್ರಕರಣವನ್ನು ಇತ್ಯರ್ಥಗೊಳಿಸಲು ದೈನಂದಿನ ವಿಚಾರಣೆಗೆ ಒಳಪಡಿಸಬೇಕು ಎಂದು ಸಂತ್ರಸ್ತೆ ಪರ ವಕೀಲರು ಕೋರಿದ್ದಾರೆ. ಐದನೇ ಅರ್ಜಿಯಲ್ಲಿ, ಸಂತ್ರಸ್ತ ಜೂನಿಯರ್ ಮಹಿಳಾ ಕೋಚ್ ಹೆಸರನ್ನು ಬಹಿರಂಗಪಡಿಸಿದ ಮತ್ತು ಸಾರ್ವಜನಿಕವಾಗಿ ಮಾನಹಾನಿ ಮಾಡಿದವರ ವಿರುದ್ಧ ಐಪಿಸಿ ಸೆಕ್ಷನ್ 228-ಎ, 499, 500 ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯು ಅಕ್ಟೋಬರ್ 21 ರಂದು ನಡೆಯಲಿದೆ.
ಪ್ರಕರಣದ ಹಿನ್ನೆಲೆ: ಹರಿಯಾಣ ಸಚಿವ ಹಾಗೂ ಭಾರತ ತಂಡದ ಮಾಜಿ ಹಾಕಿ ಆಟಗಾರ ಸಂದೀಪ್ ಸಿಂಗ್, ರಾಷ್ಟ್ರೀಯ ಅಥ್ಲೀಟ್ ಮತ್ತು ಜೂನಿಯರ್ ಮಹಿಳಾ ಕೋಚ್ವೊಬ್ಬರನ್ನು ಇನ್ಸ್ಟಾಗ್ರಾಮ್ ಮೂಲಕ ಸಂಪರ್ಕಿಸಿದ್ದರು. ಇದಾದ ಬಳಿಕ ಮಹಿಳಾ ಕೋಚ್‌ರನ್ನು ತಮ್ಮ ನಿವಾಸಕ್ಕೆ ಕರೆಸಿ ಲೈಂಗಿಕ ಕಿರುಕುಳ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆ ಬಳಿಕ ಅವರು ಕ್ರೀಡಾ ಸಚಿವ ಸ್ಥಾನ ತೊರೆದಿದ್ದರು.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಸಂದೀಪ್ ಸಿಂಗ್, ಬ್ರಿಜ್ ಭೂಷಣ್ ಶರಣ್ ಸಿಂಗ್