ಹರಿದ್ವಾರ(ಉತ್ತರಾಖಂಡ): 8 ತಿಂಗಳ ಮಗುವನ್ನು ಅಪಹರಿಸಿ ಉದ್ಯಮಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿ 7 ಮಂದಿಯನ್ನು ಪತ್ರಕರ್ತನ ನೆರವಿನಿಂದ ಪೊಲೀಸರು ಬಂಧಿಸಿದ್ದಾರೆ. ಕಿಡ್ನ್ಯಾಪ್ ಆದ ಮಗು ಮತ್ತೆ ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿದೆ. ಈ ಪ್ರಕರಣ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.
ಪ್ರಕರಣವೇನು?: ಪುತ್ರ ಸಂತಾನವಿಲ್ಲದ ಉದ್ಯಮಿಯೊಬ್ಬರು ಅಂಗನವಾಡಿ ಕಾರ್ಯಕರ್ತೆಗೆ ಮಗು ಕೊಡಿಸಲು ಕೇಳಿದ್ದರು. ಅದಕ್ಕಾಗಿ ಸಂಚು ರೂಪಿಸಿದ ಆ ಮಹಿಳೆ, ತನ್ನ ನೆರೆಮನೆಯ ಕುಟುಂಬದ ಮಗುವನ್ನೇ ಅಪಹರಿಸಲು ಪ್ಲಾನ್ ಮಾಡಿದ್ದಾರೆ. ಇದಕ್ಕಾಗಿ ಆಶಾ ಎಂಬ ಇನ್ನೊಬ್ಬ ಮಹಿಳೆಯ ಸಹಾಯ ಕೋರಿದ್ದಾರೆ.
ಮೊದಲೇ ನಿರ್ಧರಿಸಿದಂತೆ ನೆರೆಮನೆಯ 8 ತಿಂಗಳ ಮಗುವನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆ ಹೆತ್ತವರ ಕಣ್ತಪ್ಪಿಸಿ ಅಪಹರಿಸಿದ್ದಾರೆ. ಬಳಿಕ ಮಗು ಸಮೇತ ಉದ್ಯಮಿಯ ಮನೆಗೆ ಹೊರಟಿದ್ದರು. ಈ ವಿಷಯ ತಿಳಿದ ಪತ್ರಕರ್ತರೊಬ್ಬರು ಮಗುವನ್ನು ತಾನು ಖರೀದಿಸುವುದಾಗಿ ಹೇಳಿದ್ದಾರೆ. ಉದ್ಯಮಿ ನೀಡುವ ಹಣಕ್ಕಿಂತಲೂ ದುಪ್ಪಟ್ಟು ನೀಡುವುದಾಗಿ ಆಸೆ ತೋರಿಸಿದ್ದಾರೆ.
ಇದಕ್ಕೆ ಮರುಳಾದ ಅಪಹರಣಕಾರರು ಒಪ್ಪಿ ಮಗುವನ್ನು 2 ಲಕ್ಷಕ್ಕೆ ಮಾರಾಟ ಮಾಡಲು ಒಪ್ಪಿದ್ದಾರೆ. ಬಳಿಕ ಈ ಬಗ್ಗೆ ಪತ್ರಕರ್ತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವನ್ನು ಹೊಂದಿದ್ದ ಗ್ಯಾಂಗ್ ನಗರದ ಚೆಕ್ಪೋಸ್ಟ್ ಬಳಿ ಇರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಕಾರ್ಯಾಚರಣೆಗಳಿಸಿದ ಪೊಲೀಸರು, ಅಪಹರಣಕಾರರ ಮೇಲೆ ದಾಳಿ ಮಾಡಿದ್ದಾರೆ. ಮಗುವನ್ನು ಸುರಕ್ಷಿತವಾಗಿ ಕಾಪಾಡಿ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ, ಮಗುವನ್ನು ಉದ್ಯಮಿಗೆ ಮಾರಾಟ ಮಾಡಲು ಕಿಡ್ನ್ಯಾಪ್ ಮಾಡಿದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಆಧಾರದ ಮೇಲೆ ಉದ್ಯಮಿ ಸೇರಿದಂತೆ ಇನ್ನೂ 5 ಮಂದಿಗೆ ಪೊಲೀಸರು ಕೈಕೋಳ ತೊಡಿಸಿದ್ದಾರೆ. ಮಗುವನ್ನು ಮರಳಿ ತಾಯಿಯ ಮಡಿಲಿಗೆ ಸೇರಿಸಿದ್ದಾರೆ.
ಓದಿ: ಮಧ್ಯರಾತ್ರಿ ಪ್ರಿಯತಮೆಯ ಮನೆಗೆ ಬಂದ ಪ್ರೇಮಿ.. ಯುವತಿ ಮನೆಯವರು ಬೆನ್ನಟ್ಟಿದಾಗ ಬಾವಿಗೆ ಹಾರಿದ!