ಹರಿದ್ವಾರ(ಉತ್ತರಾಖಂಡ): ಕೊರೊನಾ ಬಿಕ್ಕಟ್ಟಿನ ನಡುವೆ ಕುಂಭಮೇಳದ ಮೂರನೇ ಮತ್ತು ಅಂತಿಮ ಶಾಹಿ ಸ್ನಾನವನ್ನು ಸಾಂಕೇತಿಕವಾಗಿ ಪೂರ್ಣಗೊಳಿಸಲಾಗಿದೆ.
ಈ ವೇಳೆ ಸಾಧುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಧಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಿದ್ದು, ಒಟ್ಟು 13 ಅಖಾಡಗಳ ಶಾಹಿ ಸ್ನಾನವನ್ನು ಮುಗಿಸಿವೆ.
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕೆಲವೇ ಕೆಲವು ಸಾಧುಗಳು 'ಹರ್ ಕಿ ಪೌರಿ ಘಾಟ್'ಗೆ ಆಗಮಿಸಿ, ಸಾಂಕೇತಿಕವಾಗಿ ಸ್ನಾನ ಮುಗಿಸಿದ್ದಾರೆ.
ಮೊದಲಿಗೆ ನಿರಂಜನಿ ಮತ್ತು ಆನಂದ್ ಅಖಾಡಗಳು ಸ್ನಾನ ಮುಗಿಸಿದ್ದು, ನಂತರ ಜುನಾ, ಅಗ್ನಿ, ಅವಾಹನ್, ಕಿನ್ನಾರ್ ಅಖಾಡಗಳು ಹರ್ ಕಿ ಪೌರಿ ಘಾಟ್ಗೆ ಬಂದು ಶಾಹಿ ಸ್ನಾನ ಮುಗಿಸಿವೆ.
ಇದನ್ನೂ ಓದಿ: ಪ್ರಧಾನಿ ಮೋದಿ ಚಿಕ್ಕಮ್ಮ ಕೋವಿಡ್ ಸೋಂಕಿಗೆ ಬಲಿ
ಇವೆಲ್ಲವುಗಳ ನಂತರ ಮಹಾನಿರ್ವಾಣಿ ಅಟಲ್ ಅಖಾಡ ಮತ್ತು ಮೂರು ಭೈರಾಗಿ ಅಖಾಡಗಳಾದ ನಿರ್ಮಲ್ ಪಂಚಾಯಿತಿ ಅಖಾಡ, ಬಡಾ ನೆಪ್ಚೂನ್ (Bada neptune) ಪಂಚಾಯಿತಿ, ಮತ್ತು ಪಂಚಾಯಿತಿ ಅಖಾಡ ನಯಾಗಳು ಗಂಗಾ ಸ್ನಾನ ಮಾಡಿವೆ.
ಕೊನೆಯ ಶಾಹಿ ಸ್ನಾನವನ್ನು ಪೂರ್ಣಗೊಳಿಸುವುದು ಕುಂಭಮೇಳ ಆಡಳಿತ ಮತ್ತು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಆದರೆ, ಇಂದು ನಡೆದ ಕುಂಭಮೇಳ ಶಾಹಿ ಸ್ನಾನ ಸಾಂಗವಾಗಿ ನೆರವೇರಿದೆ ಎಂದು ಕುಂಭ ಮೇಳ ಅಧಿಕಾರಿ ಮತ್ತು ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಕ್ ರಾವತ್ ಹೇಳಿದ್ದಾರೆ.
ಶಾಹಿ ಸ್ನಾನ ಸಮಯದಲ್ಲಿ ಎಲ್ಲಾ ಹದಿಮೂರು ಅಖಾಡಗಳು ಸಾಮಾಜಿಕ ದೂರವನ್ನು ಅನುಸರಿಸಿ, ಮಾಸ್ಕ್ ಧರಿಸಿದ್ದರು ಎಂದು ಕುಂಭಮೇಳ ಇನ್ಸ್ಪೆಕ್ಟರ್ ಸಂಜಯ್ ಗುಂಜ್ಯಾಲ್ ಸ್ಪಷ್ಟನೆ ನೀಡಿದ್ದಾರೆ.