ಹರಿದ್ವಾರ (ಉತ್ತರಾಖಂಡ): ಹರಿದ್ವಾರ 'ಧರ್ಮ ಸಂಸದ್'ನಲ್ಲಿ ಉದ್ರೇಕಕಾರಿ ಭಾಷಣ ಮಾಡಿದ ಆರೋಪದಡಿ ಧಾರ್ಮಿಕ ಮುಖಂಡ ಯತಿ ನರಸಿಂಗಾನಂದ ಅವರನ್ನು ಹರಿದ್ವಾರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕಳೆದ ತಿಂಗಳು ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ ನೀಡುವ ಭಾಷಣ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣ ಸಂಬಂಧ ಉತ್ತರ ಪ್ರದೇಶ ಕೇಂದ್ರ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಸೀಂ ರಿಜ್ವಿ ಅಲಿಯಾಸ್ ಜಿತೇಂದ್ರ ನಾರಾಯಣ ತ್ಯಾಗಿಯನ್ನು ಜ.13ರಂದು ಬಂಧಿಸಲಾಗಿತ್ತು. ಇವರ ಬಂಧನದ ಬಳಿಕ ಪ್ರಕರಣದಲ್ಲಿ ಇದು ಎರಡನೇ ಬಂಧನವಾಗಿದೆ.
ಇದನ್ನೂ ಓದಿ: 2029ರಲ್ಲಿ ದೇಶದಲ್ಲಿ ಹಿಂದೂಗಳಲ್ಲದವರು ಪ್ರಧಾನಿಗಳಾಗುತ್ತಾರೆ: ಹರಿದ್ವಾರದ ಧರ್ಮ ಸಂಸದ್ ಭವಿಷ್ಯ
ದ್ವೇಷ ಭಾಷಣದ ವಿರುದ್ಧ ಯತಿ ನರಸಿಂಗಾನಂದ ಸೇರಿದಂತೆ 10ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಹರಿದ್ವಾರ ಧರ್ಮ ಸಂಸದ್‌ನಲ್ಲಿ ನಡೆದ ಭಾಷಣಗಳ ಬಗ್ಗೆ ಸ್ವತಂತ್ರ ತನಿಖೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಉತ್ತರಾಖಂಡ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿತ್ತು.
ಇದನ್ನೂ ಓದಿ: ಧರ್ಮ ಸಂಸದ್‌ನಲ್ಲಿ ದ್ವೇಷ ಭಾಷಣ: ಸುಪ್ರೀಂಕೋರ್ಟ್ನಿಂದ ಇಂದು ವಿಚಾರಣೆ