ಅಹಮದಾಬಾದ್(ಗುಜರಾತ್): ಗುಜರಾತ್ ಕಾಂಗ್ರೆಸ್ನಲ್ಲಿ ಉಂಟಾಗಿರುವ ಆಂತರಿಕ ಕಲಹದಿಂದ ಬೇಸತ್ತು ಪಕ್ಷ ತೊರೆದಿರುವ ಪ್ರಭಾವಿ ಯುವ ನಾಯಕ ಹಾರ್ದಿಕ್ ಪಟೇಲ್, ಟ್ವೀಟ್ ಮೂಲಕ ಪಕ್ಷದ ಮುಖಂಡರೊಬ್ಬರ ವಿರುದ್ಧ ಹರಿಹಾಯ್ದಿದ್ದಾರೆ. ಈ ವೇಳೆ, ಭಗವಾನ್ ಶ್ರೀರಾಮನ ವಿರುದ್ಧ ನಿಮಗೆ ಯಾವ ಕಾರಣಕ್ಕಾಗಿ ದ್ವೇಷವಿದೆ? ಹಿಂದೂಗಳನ್ನ ಇಷ್ಟೊಂದು ದ್ವೇಷಿಸುವುದೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಅಯೋಧ್ಯೆ ರಾಮಮಂದಿರ ವಿಚಾರವಾಗಿ ಖಾರವಾಗಿ ಮಾತನಾಡಿದ್ದ ಕೇಂದ್ರದ ಮಾಜಿ ಸಚಿವ ಭರತಸಿಂಹ ಸೋಲಂಕಿ, ರಾಮಮಂದಿರದ ಇಟ್ಟಿಗೆಗಳ ಮೇಲೆ ನಾಯಿಗಳು ಮೂತ್ರ ವಿಸರ್ಜನೆ ಮಾಡುತ್ತವೆ ಎಂಬ ವಿವಾದಿತ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಪಟೇಲ್ ಸಮುದಾಯದ ಪ್ರಭಾವಿ ನಾಯಕ ಹಾರ್ದಿಕ್ ಪಟೇಲ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
![hardik patel tweet against Controversial statement of Bharatsinh solanki](https://etvbharatimages.akamaized.net/etvbharat/prod-images/ftczeuyx0aev144_2405newsroom_1653394547_877.jpg)
ಹಾರ್ದಿಕ್ ಪಟೇಲ್ ಟ್ವೀಟ್: ಕಾಂಗ್ರೆಸ್ ಪಕ್ಷದ ಮುಖಂಡರ ಬಳಿ ನಾನು ಕೇಳಲು ಬಯಸುತ್ತೇನೆ. ಭಗವಾನ್ ಶ್ರೀರಾಮನೊಂದಿಗೆ ನಿಮಗೆ ಯಾವ ದ್ವೇಷವಿದೆ? ಹಿಂದೂಗಳನ್ನ ಇಷ್ಟೊಂದು ದ್ವೇಷಿಸುವುದೇಕೆ? ಶತಮಾನಗಳ ನಂತರ ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ದೇಗುಲ ನಿರ್ಮಾಣ ಮಾಡಲಾಗ್ತಿದೆ. ಆದರೂ, ಕಾಂಗ್ರೆಸ್ ಮುಖಂಡರು ಶ್ರೀರಾಮನ ವಿರುದ್ಧ ಹೇಳಿಕೆ ನೀಡುತ್ತಲೇ ಇದ್ದಾರೆ.
ಕಾಂಗ್ರೆಸ್ ಪಕ್ಷ ದೇಶದಲ್ಲಿ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡ್ತಿದೆ. ಹಿಂದೂ ಧರ್ಮದ ನಂಬಿಕೆಗಳಿಗೆ ಕಾಂಗ್ರೆಸ್ ಧಕ್ಕೆ ತರುತ್ತಿದೆ ಎಂದು ಈ ಹಿಂದೆ ನಾನು ಹೇಳಿದ್ದೆ. ರಾಮ ಮಂದಿರದ ಇಟ್ಟಿಗೆ ಮೇಲೆ ನಾಯಿ ಮೂತ್ರ ಮಾಡುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಗುಜರಾತ್ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: 'ಕೈ' ಬಿಟ್ಟ ಬೆನ್ನಲ್ಲೇ ಸುದ್ದಿಗೋಷ್ಠಿ: ಕಾಂಗ್ರೆಸ್ ಟೀಕಿಸಿ, ಬಿಜೆಪಿ ಹೊಗಳಿದ ಹಾರ್ದಿಕ್ ಪಟೇಲ್
2019ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದ ಹಾರ್ದಿಕ್ ಪಟೇಲ್, ಕಳೆದ ಮೇ. 18ರಂದು ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಹೊರ ಬಂದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ದೇಶದಲ್ಲಿ ನಡೆಯುತ್ತಿರುವ ಹಿಂದೂ ಪರ ಬೆಳವಣಿಗೆಗಳಿಂದ ಕಾಂಗ್ರೆಸ್ ಪಕ್ಷ ದೂರ ಇರುವುದು ಪಕ್ಷಕ್ಕೆ ಹಾನಿಯನ್ನುಂಟು ಮಾಡಿದ್ದು, ಇದಕ್ಕೆ ಜ್ಞಾನವಾಪಿ ಮಸೀದಿ ವಿವಾದ ಪ್ರಮುಖ ಉದಾಹರಣೆ ಎಂದು ತಿಳಿಸಿದ್ದರು.
ದೇಶದಲ್ಲಿ ಅನೇಕರು ಮಹಾದೇವನ ಭಕ್ತರಿದ್ದಾರೆ. ಮಸೀದಿ ಅಥವಾ ಇತರ ಸ್ಥಳಗಳಲ್ಲಿ ಶಿವಲಿಂಗ ಪತ್ತೆಯಾದಾಗ ನಮ್ಮ ನಂಬಿಕೆಗಳು ಮತ್ತಷ್ಟು ಬಲಗೊಳ್ಳುತ್ತವೆ. ಇದನ್ನ ಎಲ್ಲರೂ ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು. ಆದರೆ, ಕಾಂಗ್ರೆಸ್ ನಾಯಕರು ಅಂತಹ ನಿರ್ಧಾರ ಅಥವಾ ಹೇಳಿಕೆಗಳಿಂದ ದೂರ ಸರಿಯತ್ತಾರೆ ಎಂದಿದ್ದರು.
ಇದೇ ವೇಳೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಬಿಜೆಪಿ ಶ್ಲಾಘಿಸಿರುವ ಹಾರ್ದಿಕ್ ಪಟೇಲ್, ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ಧು ನಿರ್ಧಾರಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರು. ಗುಜರಾತ್ನಲ್ಲಿ ಕಾಂಗ್ರೆಸ್ ನಾಯಕರು ಇಲ್ಲಿನ ಜನರ ವಿರುದ್ಧ ಪಕ್ಷಪಾತ ಮಾಡ್ತಿದ್ದು, ಇದು ಪಕ್ಷದಲ್ಲಿ ದೊಡ್ಡ ಮಟ್ಟದ ಸಮಸ್ಯೆ ಉದ್ಭವವಾಗುವಂತೆ ಮಾಡಿದೆ ಎಂದು ತಿಳಿಸಿದ್ದರು.