ಮಧ್ಯಪ್ರದೇಶ: ಅನಕ್ಷರತೆಯ ಕಾರಣಕ್ಕೆ ಇಲ್ಲಿಯ ಗ್ರಾಮ ಪಂಚಾಯಿತಿಯ ಲಖನ್ ಲಾಲ್ ಭಿಲಾಲ ಎಂಬ ಸರ್ಪಂಚ್ವೊಬ್ಬರು 50 ರೂಪಾಯಿಯ ಸ್ಟಾಂಪ್ ಪೇಪರ್ ಬರೆದು ತಮ್ಮ ಚುನಾಯಿತ ಸ್ಥಾನಕ್ಕೆ ಪ್ರತಿನಿಧಿ ನೇಮಿಸಿದ್ದಾರೆ. ಭಿಲಾಲ ಹಾಗೂ ಅವರ ಕುಟುಂಬ ಸದಸ್ಯರೆಲ್ಲರೂ ಅನಕ್ಷರಸ್ಥರು. ಆದ್ದರಿಂದ ಪಂಚಾಯಿತಿ ನಿಯಮಕ್ಕೆ ವಿರುದ್ಧವಾಗಿದ್ದರೂ ಸಹ ತಮ್ಮ ಕರ್ತವ್ಯಗಳನ್ನು ನಿಭಾಯಿಸಲು ಪ್ರತಿನಿಧಿ ನೇಮಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
"ಆದಾಯ, ವೆಚ್ಚದ ವಿವರಗಳ ಬಗ್ಗೆ ನಿಗಾ ಇಡಲು ನಾನು ಸಿದ್ಧಾಂತ್ ತಿವಾರಿ ಎಂಬುವರನ್ನು ನನ್ನ ಪ್ರತಿನಿಧಿಯಾಗಿ ನೇಮಿಸಿದ್ದೇನೆ. ಆತನ್ನು ನನ್ನ ಸ್ವಂತ ಕುಟುಂಬದ ಸದಸ್ಯರಂತೆ ನಂಬುತ್ತೇನೆ" ಎಂದು ಸರಪಂಚ್ ಸಮರ್ಥಿಸಿಕೊಂಡಿದ್ದಾರೆ.
"ಸರ್ಪಂಚ್ ಕಾಗದದ ಕೆಲಸ ಮಾಡಲು ಯಾರನ್ನಾದರೂ ನೇಮಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ, ತಿಳಿದಿರುವ ಸದಸ್ಯರನ್ನು ಏಕೆ ನೇಮಿಸಬಾರದು? ಯಾರಾದರೂ ಅನಕ್ಷರತೆಯ ಲಾಭ ಪಡೆದುಕೊಂಡು ಪ್ರಮುಖ ದಾಖಲೆಗಳಿಗೆ ಸಹಿ ಹಾಕಿಸಿಕೊಂಡರೆ ಏನು ಮಾಡುವುದು?" ಎಂದು ಸಿದ್ಧಾಂತ್ ತಿವಾರಿ ಹೇಳಿದ್ದಾರೆ.
"ಪ್ರತಿನಿಧಿ ನೇಮಕ ಮಾಡಿರುವುದು ಕಾನೂನು ಬಾಹಿರ. ಚುನಾಯಿತ ಸಾರ್ವಜನಿಕ ಪ್ರತಿನಿಧಿಯಾಗಿ ಸೂಕ್ತವಾದ ಕರ್ತವ್ಯಗಳನ್ನು ಸರಪಂಚರು ನಿರ್ವಹಿಸಬೇಕು. ಆದರೆ, ಈ ವಿಚಾರದಲ್ಲಿ ಅವರು ನುಣುಚಿಕೊಂಡಿದ್ದಾರೆ. ಇಂತಹ ಯಾವುದೇ ಘಟನೆ ಬಗ್ಗೆ ನನಗೆ ತಿಳಿದಿಲ್ಲ. ನನ್ನ ಗಮನಕ್ಕೆ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು" ಎಂದು ಹಿರಿಯ ಅಧಿಕಾರಿಯೊಬ್ಬರು ಸಿಇಒ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಯಲ್ಲಿ ಬಿರುಕು: ಮಹತ್ವದ ಸಭೆ ಕರೆದ ಸಿಎಂ ನಿತೀಶ್ ಕುಮಾರ್