ಪ್ರಯಾಗ್‌ರಾಜ್: ಮಸೀದಿಯೋ, ಮಂದಿರವೋ ಎಂಬ ತರ್ಕಕ್ಕೀಡು ಮಾಡಿರುವ ಜ್ಞಾನವಾಪಿ ಮಸೀದಿಯನ್ನು ಸಮೀಕ್ಷೆಕ್ಕೆ ಅಲಹಬಾದ್ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸಮೀಕ್ಷೆಗೆ ಅವಕಾಶ ಸಿಗುತ್ತಾ ಅಥವಾ ಯಥಾಸ್ಥಿತಿಗೆ ಸೂಚನೆ ಸಿಗಲಿದೆಯಾ ಎಂಬ ಬಗ್ಗೆ ಕುತೂಹಲ ಮನೆ ಮಾಡಿತ್ತು. ಈ ಕುತೂಹಲಕ್ಕೆ ಅಲಹಾಬಾದ್ ಹೈಕೋರ್ಟ್ ತೆರೆ ಎಳೆದಿದೆ.
ಮಸೀದಿಯ ಸಮಿಕ್ಷೆ ನಡೆಸಲು ವಾರಾಣಸಿ ಜಿಲ್ಲಾ ನ್ಯಾಯಾಲಯ ಸೂಚಿಸಿದ್ದನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ತಕ್ಷಣವೇ ಸರ್ವೇಗೆ ತಡೆ ನೀಡಿದ್ದ ಸುಪ್ರೀಂ ಯಥಾಸ್ಥಿತಿ ಕಾಪಾಡಲು ಸೂಚಿಸಿತ್ತು. ಅಲ್ಲದೇ ಹೈಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸಿ ಶೀಘ್ರವೇ ತೀರ್ಪು ನೀಡುವಂತೆಯೂ ಆದೇಶಿಸಿತ್ತು. ಸುಪ್ರೀಂ ನಿರ್ದೇಶನದ ಮೇರೆಗೆ ಹೈಕೋರ್ಟ್‌ನಲ್ಲಿ ಉಭಯ ಪಕ್ಷಗಾರರು ಪ್ರಶ್ನಿಸಿದ್ದು, ಅದರ ತೀರ್ಪು ಇಂದು ಹೊರಬೀದ್ದಿದೆ.
ಸಮೀಕ್ಷೆ ಕುರಿತು ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಹಿಂದೂ ಮತ್ತು ಮುಸ್ಲಿಂ ಪಕ್ಷಗಳು ತಮ್ಮ ವಾದ ಮಂಡಿಸಿದ್ದವು. ನ್ಯಾಯಾಲಯದ ಆದೇಶದ ಮೇರೆಗೆ ಹಾಜರಾದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಹೆಚ್ಚುವರಿ ಮಹಾನಿರ್ದೇಶಕರು ಸಮೀಕ್ಷೆಯಲ್ಲಿ ಅಳವಡಿಸಿಕೊಳ್ಳಬೇಕಾದ ತಂತ್ರಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದ್ದರು.
ವೈಜ್ಞಾನಿಕ ಸಮೀಕ್ಷೆಯು ಜ್ಞಾನವಾಪಿ ಮಸೀದಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದಿದ್ದರು. ಮೂರು ದಿನಗಳ ವಿಚಾರಣೆ ನಡೆಸಿದ ಕೋರ್ಟ್ ವಾದ- ಪ್ರತಿವಾದ ಆಲಿಸಿತ್ತು. ಜುಲೈ 27 ರಂದು ವಿಚಾರಣೆತ ತೀರ್ಪನ್ನು ಕಾಯ್ದಿರಿಸಿತ್ತು. ಹೀಗಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಿತಿಂಕರ್ ದಿವಾಕರ್ ಅವರ ಏಕ ಸದಸ್ಯ ಪೀಠ ಇಂದು ತೀರ್ಪು ಪ್ರಕಟಿಸಿದೆ.
ಮಸೀದಿ ಸಮಿತಿ ವಾದವೇನು?: ನ್ಯಾಯಾಲಯದಲ್ಲಿ ವಾದ ಮಂಡಿಸಿದ ಮಸೀದಿ ಸಮಿತಿ ಪರ ವಕೀಲ ಎಸ್‌ಎಫ್‌ಎ ನಖ್ವಿ ಅವರು, ನ್ಯಾಯಾಲಯದ ಆದೇಶದ ಮೂಲಕ ದಿಢೀರ್ ವೈಜ್ಞಾನಿಕ ಸಮೀಕ್ಷೆಯಿಂದ ಜ್ಞಾನವಾಪಿ ಮೂಲ ರಚನೆಗೆ ಹಾನಿಯಾಗುವ ಆತಂಕವಿದೆ. ಸಿವಿಲ್ ಮೊಕದ್ದಮೆ ಇದ್ದರೂ, ಸಮೀಕ್ಷೆ ಮತ್ತು ಅಗೆಯುವ ಆತುರದ ನಿರ್ಧಾರವು ಕಟ್ಟಡದ ಮೂಲ ರಚನೆಗೆ ಮಾರಕವಾಗಲಿದೆ ಎಂದು ವಾದಿಸಿದ್ದರು.
ಹೊಸ ಹೊಸ ತಕರಾರು ಅರ್ಜಿ: ಇತ್ತ ಸಮೀಕ್ಷೆ ತೀರ್ಪಿನ ಕುತೂಹಲದ ಬೆನ್ನಲ್ಲೇ, ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಹೊಸ ಹೊಸ ಅರ್ಜಿಗಳು ಸಲ್ಲಿಕೆಯಾಗಿವೆ. ಬುಧವಾರ ಮಧ್ಯಾಹ್ನ ವಿಶ್ವ ವೈದಿಕ ಸನಾತನ ಸಂಘದ ವತಿಯಿಂದ ಮಸೀದಿಯಲ್ಲಿ ಸಿಕ್ಕಿರುವ ಶಿವಲಿಂಗಕ್ಕೆ ಅಧಿಕ ಮಾಸದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಿ ಎಂದು ಕೋರಿ ಅರ್ಜಿ ಗುಜರಾಯಿಸಲಾಗಿದೆ.
ಸನಾತನ ಧರ್ಮದಲ್ಲಿ ಶ್ರಾವಣ ಮಾಸದಲ್ಲಿ ಶಿವಲಿಂಗವನ್ನು ಮಣ್ಣಿನಿಂದ ರೂಪಿಸಿ ಪೂಜೆ ಮಾಡುತ್ತಾರೆ. ಜ್ಞಾನವಾಪಿಯಲ್ಲಿ ಸಿಕ್ಕಿರುವ ಲಿಂಗಕ್ಕೆ ಆರಾಧನೆ ತುಂಬಾ ಅವಶ್ಯಕವಾಗಿದೆ. ಆದಿ ವಿಶ್ವೇಶ್ವರನ ಶಿವಲಿಂಗವನ್ನು ಪೂಜಿಸುವ ಮತ್ತು ಅದರ ಮಧುರಾನಂದವನ್ನು ಸವಿಯುವ ಹಕ್ಕನ್ನು ತಕ್ಷಣವೇ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಫಿರ್ಯಾದಿದಾರರ ಮನವಿಯನ್ನು ಕೋರ್ಟ್ ಅಂಗೀಕರಿಸಿದ್ದು, ಆಗಸ್ಟ್ 5 ರಂದು ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗಿದೆ.
ಇನ್ನೊಂದೆಡೆ, ಮಸೀದಿಯಲ್ಲಿ ಹಿಂದೂ ಕುರುಹುಗಳನ್ನು ನಾಶ ಮಾಡಲಾಗುತ್ತಿದೆ. ಕಟ್ಟಡಕ್ಕೆ ಮುಸ್ಲಿಮರು ಸೇರಿದಂತೆ ಯಾರೂ ಪ್ರವೇಶಿಸಿದಂತೆ ತಡೆಯಬೇಕು ಎಂದು ಕೋರಿ ಮತ್ತೊಂದು ಅರ್ಜಿ ಸಲ್ಲಿಸಲಾಗಿದೆ.
ಇದನ್ನೂ ಓದಿ: ನಾಳೆ ಜ್ಞಾನವಾಪಿ ಮಸೀದಿ ಅಂತಿಮ ತೀರ್ಪು: ಮಸೀದಿಯಲ್ಲೇನಿತ್ತು ಎಂಬುದರ ಬಗ್ಗೆ 5 ದಿನ ಸಾಕ್ಷ್ಯಗಳ ವಿಶೇಷ ಪ್ರದರ್ಶನ