ವಾರಣಾಸಿ(ಉತ್ತರ ಪ್ರದೇಶ): ಭಾರಿ ವಿವಾದ ಸೃಷ್ಟಿಸಿರುವ ವಾರಣಾಸಿಯ ಜ್ಞಾನವಾಪಿ ಮಸೀದಿಯ ಸರ್ವೇ ಕಾರ್ಯ ಇಂದು ಮುಂಜಾನೆಯಿಂದಲೇ ಆರಂಭವಾಗಿದೆ. ಸಮೀಕ್ಷೆಗಾಗಿ ಸ್ಥಳೀಯ ನ್ಯಾಯಾಲಯ ಹೆಚ್ಚುವರಿಯಾಗಿ ಇಬ್ಬರು ಆಯುಕ್ತರನ್ನು ನೇಮಿಸಿದೆ. ನ್ಯಾಯಾಲಯ ನೇಮಕ ನಿಯೋಜಿಸಿರುವ ಆಯುಕ್ತರೊಂದಿಗೆ ಸಮೀಕ್ಷೆಯ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಜ್ಞಾನವಾಪಿ-ಶೃಂಗಾರ ಗೌರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ವಕೀಲ ಕಮಿಷನರ್ ಅಜಯ್ ಮಿಶ್ರಾ ಜೊತೆ ವಾದಿ-ಪ್ರತಿವಾದಿ ವಕೀಲು ಮಸೀದಿ ತಲುಪಿದ್ದಾರೆ. ಜ್ಞಾನವಾಪಿ ಮಸೀದಿ ಆವರಣ ಮತ್ತು ಮುಖ್ಯ ಗೇಟ್‌ನಿಂದ ಸುಮಾರು 1 ಕಿಲೋಮೀಟರ್ ದೂರದಲ್ಲಿ ಮಾಧ್ಯಮವನ್ನು ತಡೆಹಿಡಿಯಲಾಗಿದೆ. ಜ್ಞಾನವಾಪಿ ಮಸೀದಿಯ ವಿಡಿಯೋಗ್ರಾಫಿ ಸಮೀಕ್ಷೆ ಕಾರ್ಯ ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿದ್ದು, ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿದೆ. ಜ್ಞಾನವಾಪಿ ಮಸೀದಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸಮೀಕ್ಷೆ ಹಿನ್ನೆಲೆ ಜಿಲ್ಲಾ ಮ್ಯಾಜಿಸ್ಟ್ರೇಟ್ ವಾರಣಾಸಿ ಅಂಜುಮನ್ ಅರೇಂಜ್ಮೆಂಟ್ಸ್ ಮಸಾಜಿದ್‌ಗೆ ಮಸೀದಿಯೊಳಗೆ ಬೀಗ ಹಾಕಲಾದ ಕೀಲಿಗಳನ್ನು ನೀಡುವಂತೆ ನೋಟಿಸ್ ಜಾರಿ ಮಾಡಿದ್ದರು. ಸ್ಥಳದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಎಲ್ಲಾ ಜನರಿಗೆ ನ್ಯಾಯಾಲಯ ಮನವಿ ಮಾಡಿದೆ.
ಇಂದಿನಿಂದ ಆರಂಭವಾದ ಗ್ಯಾನವಾಪಿ ಮಸೀದಿಯ ಸರ್ವೇ ಕಾರ್ಯವನ್ನು ತ್ವರಿತಗತಿಯಲ್ಲಿ ಮುಂದುವರಿಸಿ, ಮೇ 17 ರೊಳಗೆ ಸಂಪೂರ್ಣ ವರದಿಯನ್ನು ಸಲ್ಲಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಈ ಮಧ್ಯೆ ಸುಪ್ರೀಂಕೋರ್ಟ್ ಸಹ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನಿರ್ದೇರ್ಶಿಸಲು ಕೋರಿದ್ದ ಅರ್ಜಿಯನ್ನ ತಳ್ಳಿಹಾಕಿದೆ.
ಓದಿ: ಜ್ಞಾನವಾಪಿ-ಶೃಂಗಾರ್ ಗೌರಿ ಕಾಂಪ್ಲೆಕ್ಸ್ ಸಮೀಕ್ಷೆ ವಿಚಾರ: ಯಥಾಸ್ಥಿತಿಗೆ ಆದೇಶಿಸಲು ಸುಪ್ರೀಂ ನಕಾರ
ಜ್ಞಾನವಾಪಿ ಮಸೀದಿಯೊಳಗೆ ಗಂಗಾ, ಹನುಮಾನ್, ಶ್ರೀಗೌರಿ-ಶಂಕರ, ಗಣೇಶ, ಶ್ರೀ ಮಹಾಕಾಳೇಶ್ವರ, ಶ್ರೀ ಮಹೇಶ್ವರ, ಶ್ರೀದೇವಿ ಶೃಂಗಾರ ಗೌರಿ ದೇವತೆಗಳು ಕಾಣಿಸಿವೆ ಎನ್ನಲಾಗ್ತಿದೆ. ಈ ಹಿನ್ನೆಲೆ ಮಸೀದಿಯೊಳಗೆ ದೇವತೆಗಳ ದರ್ಶನ, ಪೂಜೆ ಮಾಡಲು ಅವಕಾಶ ನೀಡುವಂತೆ ಕೋರಿ ಐವರು ಮಹಿಳೆಯರು ನ್ಯಾಯಾಲಯಕ್ಕೆ 18 ಆಗಸ್ಟ್ 2021 ರಂದು ಅರ್ಜಿ ಸಲ್ಲಿಸಿದ್ದರು.
ರಾಖಿ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ, ಈ ಪ್ರದೇಶದಲ್ಲಿ ಮೊಘಲರ ಆಳ್ವಿಕೆಯಲ್ಲಿ ದೇವಾಲಯ ಸಂಕೀರ್ಣವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ. ಹಳೆಯ ಕಾಶಿ ವಿಶ್ವನಾಥ ದೇವಾಲಯದ ಸಂಕೀರ್ಣದಲ್ಲಿ ಕಾಣುವ ಅಥವಾ ಕಾಣದ ದೇವತೆಗಳನ್ನು ಪೂಜಿಸುವ ಹಕ್ಕು (1991ರ ಕಾಯ್ದೆಯಡಿ) ಭಕ್ತರಿಗೆ ಇದೆ ಎಂದು ಉಲ್ಲೇಖಿಸಿದ್ದರು.
ವಾರಣಾಸಿಯ ಸಿವಿಲ್ ನ್ಯಾಯಾಲಯವು ಏ.26ರಂದು ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪರಿಶೀಲನೆ ನಡೆಸಲು ಮತ್ತು ಚಿತ್ರೀಕರಣಕ್ಕೆ ಆದೇಶಿಸಿತ್ತು. ಆದರೆ, ಜ್ಞಾನವಾಪಿ ಮಸೀದಿಯ ಆಡಳಿತ ಮಂಡಳಿಯು ನ್ಯಾಯಾಲಯದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ, ಮಸೀದಿಗೊಳಗೆ ಮುಸ್ಲಿಮೇತರರು ಪ್ರವೇಶಿಸದಂತೆ ಮತ್ತು ಚಿತ್ರೀಕರಣಕ್ಕೆ ನಿಷೇಧಿಸಲಾಗಿದೆ.
ಮೇ 12 ರಂದು ಆಕ್ಷೇಪಣಾ ಅರ್ಜಿಗಳನ್ನು ವಿಚಾರಣೆ ನಡೆಸಿದ ವಾರಣಾಸಿ ಕೋರ್ಟ್ ಮಸೀದಿಯ ಸರ್ವೇ ಕಾರ್ಯವನ್ನು ಮುಂದುವರಿಸಿ, ಮೇ 17 ರೊಳಗೆ ವರದಿ ನೀಡಬೇಕು. ಅಲ್ಲದೇ, ಸರ್ವೇ ಕಾರ್ಯಕ್ಕಾಗಿ ಹೆಚ್ಚುವರಿ ಕಮಿಷನರ್ರನ್ನು ನಿಯೋಜಿಸಿ ಆದೇಶ ಹೊರಡಿಸಿತ್ತು. ಕೋರ್ಟ್ ಈ ಮೊದಲು ನೇಮಿಸಿದ್ದ ಅಜಯ್ ಮಿಶ್ರಾ ಅವರೊಂದಿಗೆ ಎರಡನೇ ಕಮಿಷನರ್ ಆಗಿ ವಿಶಾಲ್ ಕುಮಾರ್ ಸಿಂಗ್ ಅವರನ್ನು ನೇಮಿಸಿತ್ತು.
ಆಯೋಗದ ಕ್ರಮ ಪೂರ್ಣಗೊಳ್ಳುವವರೆಗೂ ಸರ್ವೇ ಮುಂದುವರಿಯಲಿದೆ. ಮಸೀದಿಯ ಮೂಲೆ ಮೂಲೆಯನ್ನು ಸರ್ವೇ ಮಾಡಬೇಕು. ಸಮೀಕ್ಷೆಯ ವರದಿಯನ್ನು ಮೇ 17ರಂದು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಸಿದೆ.